ಬಸವಕಲ್ಯಾಣ: ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಏ.೩೦ರಿಂದ ಮೂರು ದಿನ ನಡೆಯಲಿರುವ ಮಹಾತ್ಮ ಬಸವೇಶ್ವರರ ಜಾತ್ರಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಬೃಹತ್ ಕಾರ್ ರ‍್ಯಾಲಿ ನಡೆಸಿ ಭರ್ಜರಿ ಪ್ರಚಾರ ನಡೆಸಲಾಯಿತು.
ನಗರದ ರಥ ಮೈದಾನದಿಂದ ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಕೋಟೆ, ಬಸವೇಶ್ವರ ಮಂದಿರದಿಂದ ಮುಖ್ಯರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ತ್ರಿಪುರಾಂತ, ಸಸ್ತಾಪುರ ಬಂಗ್ಲಾದ ಬಸವ ಮಹಾದ್ವಾರದವರೆಗೆ ರ‍್ಯಾಲಿ ನಡೆದು ಮರಳಿ ತ್ರಿಪುರಾಂತನಿಂದ ಶಿವಪುರ ರಸ್ತೆ, ಹುಲಸೂರ ರಸ್ತೆ ಮಾರ್ಗವಾಗಿ ರಥ ಮೈದಾನಕ್ಕೆ ತಲುಪಿತು. ರ‍್ಯಾಲಿಯಲ್ಲಿ ೨೦೦ಕ್ಕೂ ಹೆಚ್ಚು ಕಾರುಗಳಿಗೆ ಬಸವಣ್ಣನವರ ಭಾವಚಿತ್ರ, ಧ್ವಜ ಅಳವಡಿಸಲಾಗಿತ್ತು. ಜಗಜ್ಯೋತಿ ಬಸವಣ್ಣನವರಿಗೆ ಜಯವಾಗಲಿ, ಮಹಾತ್ಮ ಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಬಸವ ಜೈಕಾರ ರಸ್ತೆಯುದ್ದಕ್ಕೂ ಮಾರ್ದನಿಸಿತು.
ರಥ ಮೈದಾನದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಹುಲಸೂರಿನ ಶ್ರೀ ಡಾ. ಶಿವಾನಂದ ಮಹಾಸ್ವಾಮೀಜಿ, ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಹಾಗೂ ಸಿಪಿಐ ಅಲಿಸಾಬ್ ರ‍್ಯಾಲಿಗೆ ಚಾಲನೆ ನೀಡಿದರು.
ಮಾಜಿ ಎಂಎಲ್ಸಿ ವಿಜಯಸಿಂಗ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಬಿಡಿವಿಎಸ್ ಅಧ್ಯಕ್ಷ ಶಶಿಕಾಂತ ದುರ್ಗೆ, ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಪದಾಧಿಕಾರಿಗಳಾದ ಡಾ.ಜಿ.ಎಸ್.ಭುರಳೆ, ಮಲ್ಲಿಕಾರ್ಜುನ ಚಿರಡೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಅನೀಲಕುಮಾರ ರಗಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಭದ್ರಿನಾಥ ಪಾಟೀಲ, ಸೋಮಶೇಖರಯ್ಯ ವಸ್ತ್ರದ, ಮುಖಂಡರಾದ ಪ್ರದೀಪ ವಾತಡೆ, ಅರ್ಜುನ ಕನಕ, ಸಂಜು ಕಾಳೇಕರ, ರವಿ ಚಂದನಕೆರೆ, ಸಂಜುಕುಮಾರ ಸುಗರೆ, ಸುಧೀರ ಕಾಡಾದಿ, ಲತಾ ಹಾರಕೂಡೆ, ಸೂರ್ಯಕಾಂತ ಜಿಲ್ಲಾಬಟ್ಟೆ ಇತರರಿದ್ದರು.
ಯುವಕರಲ್ಲಿ ಉತ್ಸಾಹ: ನಗರ ಸೇರಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಯುವಕರು ಕಾರು ರ‍್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಬಂದೋಬಸ್ತ್: ಕಾರ್ ರ‍್ಯಾಲಿ ವೇಳೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುಗಮ ಸಂಚಾರಕ್ಕೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮಾರ್ಗದರ್ಶ ನೀಡುತ್ತಿದ್ದರು.
ಉಗ್ರರ ದಮನವಾಗಲಿ: ವಿಶ್ವಗುರು ಬಸವಣ್ಣನವರ ಜಾತ್ರೆಗೆ ೭೫ ವರ್ಷ ಪೂರ್ಣವಾಗಿದ್ದು, ವಿವಿಧ ಕಾರ್ಯಕ್ರಮಗಳ ಜತೆಗೆ ಕಾರ್ ರ‍್ಯಾಲಿ ಬೃಹತ್ ಪ್ರಮಾಣದದಲ್ಲಿ ಆಯೋಜಿಸಿರುವ ದೇವಸ್ಥಾನ ಸಮಿತಿ ಉತ್ತಮ ಕಾರ್ಯ ಮಾಡಿದೆ. ಇದು ಕಲ್ಯಾಣದ ಜಾತ್ರೆಯಷ್ಟೇ ಅಲ್ಲ ಇದು ವಿಶ್ವದ ಜಾತ್ರೆ, ಬಸವಣ್ಣನವರ ತತ್ವ ಸಂದೇಶಗಳು ಮನೆ, ಮನಗಳಿಗೆ ತಲುಪಲಿ, ಜಾಗತಿಕ ಮಟ್ಟದಲ್ಲಿ ಪ್ರಚಾರ ಪ್ರಸಾರವಾಗಲಿ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಕಾರ್ ರ‍್ಯಾಲಿಗೂ ಮುನ್ನ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶ್ರೀಗಳು, ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಮೇಲೆ ಉಗ್ರರು ನಡೆಸಿದ ದಾಳಿ ತೀವ್ರ ಖಂಡಿಸಿದರು. ಉಗ್ರರ ದಮನವಾಗಲಿ. ಇದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದರು.