ಬಸವಕಲ್ಯಾಣ: ಕಲ್ಯಾಣದ ನೆಲದಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ದರ್ಬಾರ್ ನಿರೀಕ್ಷೆಗಳನ್ನು ಮೀರಿ ಯಶಸ್ವಿಯಾಗಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ವಿಶ್ವಾಸ ವ್ಯಕ್ತಪಡಿಸಿದರು.
ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨ನೇ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು, ಸೆಷ್ಟೆಂಬರ್ ೨೨ರಿಂದ ಅ.೨ರವರೆಗೆ ೧೦ ದಿನ ನಡೆಯಲಿರುವ ಶರನ್ನವರಾತ್ರಿ ದಸರಾ (ಧರ್ಮ ಸಮ್ಮೇಳನ) ದರ್ಬಾರ್ ಭಾರತದ ಉತ್ಕೃಷ್ಟ ಸಂಸ್ಕೃತಿಯನ್ನು ಎಲ್ಲರಿಗೂ ತಲುಪಿಸುವ ಸಮಾರಂಭ ಆಗಲಿದೆ. ದಸರಾ ದರ್ಬಾರ್ ಎಲ್ಲ ಸಮಾರಂಭಕ್ಕಿಂತಲೂ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಸರ್ವ ಜನಾಂಗದಲ್ಲಿ ಸಾಮರಸ್ಯ ಬೆಳೆಸುವ ಹಾಗೂ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಜೀವನ ವಿಕಾಸಕ್ಕೆ ಭದ್ರ ಬುನಾದಿ ಒದಗಿಸುವ ಸಮಾರಂಭ ಇದಾಗಿದೆ ಎಂದು ವಿಶ್ಲೇಷಿಸಿದರು.
ಭಾರತ ಹಲವು ಧರ್ಮ, ಆಚರಣೆಗಳ ನಾಡಾಗಿದೆ. ಅವರವರ ಧರ್ಮ, ಸಂಸ್ಕೃತಿ ಯಾವಾಗಲೂ ಸರ್ವ ಶ್ರೇಷ್ಠ. ಇನ್ನೊಂದು ಸಂಸ್ಕೃತಿ, ಧರ್ಮದ ಆದರ್ಶಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಭಕ್ತಿ ಭಂಡಾರಿ ಬಸವಣ್ಣನವರು `ಇವನಾರವ, ಇವನಾರವ ಎಂದೆನಿಸದಿರಲ್ಲ. ಇವನಮ್ಮವ, ಇವನಮ್ಮವ ಎಂದೆನಿಸಯ್ಯ' ಎಂದು ವಚನದ ಮೂಲಕ ವಿಶಾಲವಾದ ತತ್ವವನ್ನು ನೀಡಿದ್ದಾರೆ. ಈ ನೆಲದಲ್ಲಿ ಮಂಟಪದ ಮೂಲಕ ಎಲ್ಲ ವರ್ಗಗಳ, ಸಮುದಾಯಗಳ ಧ್ವನಿಯಾಗಿದ್ದರು. ಅವರು ಅಂದು ಮಾಡಿದ ಕಾರ್ಯ ಇಂದಿಗೂ ಪ್ರಸ್ತುತ ಎಂದರು.
ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ಮಾತನಾಡಿದರು. ಶಾಸಕ ಶರಣು ಸಲಗರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಹುಡಗಿಯ ಶ್ರೀ ವಿರೂಪಾಕ್ಷ ಶಿವಾಚಾರ್ಯ, ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯ, ಶ್ರೀ ಚಂದ್ರಶೇಖರ ಶಿವಾಚಾರ್ಯ, ಶ್ರೀ ಮೃತ್ಯುಂಜಯ ಶಿವಾಚಾರ್ಯ, ಶ್ರೀ ಡಾ.ಸಿದ್ಧಲಿಂಗ ಶಿವಾಚಾರ್ಯ, ಶ್ರೀ ಶಾಂತವೀರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಬಿಡಿವಿಎಸ್ ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ, ಪ್ರಮುಖರಾದ ಶಿವಶರಣಪ್ಪ ಸಿರಿ, ಶರಣಪ್ಪ ಬಿರಾದಾರ, ಜಗನ್ನಾಥ ಪಾಟೀಲ್ ಮಂಠಾಳ, ಸುನೀಲ ಪಾಟೀಲ್, ವಿವೇಕಾನಂದ ಹೊದಲೂರೆ, ಶ್ರೀಕಾಂತ ಬಡದಾಳೆ, ಮಲ್ಲಯ್ಯ ಸ್ವಾಮಿ, ಬಿ.ಕೆ.ಹಿರೇಮಠ, ಸೋಮಶೇಖರ ವಸ್ತ್ರದ, ಬಸವಂತಪ್ಪ ಲವಾರೆ, ದಯಾನಂದ ಶೀಲವಂತ, ರುದ್ರೇಶ್ವರ ಗೋರ್ಟಾ, ರಾಜಕುಮಾರ ಸಿರಗಾಪುರ, ಮೇಘರಾಜ ನಾಗರಾಳೆ, ಶ್ರೀಶೈಲ ವಾತಡೆ, ರವೀಂದ್ರ ನಾವದಗಿ, ಸೂರ್ಯಕಾಂತ ಮಠ, ವೀರಣ್ಣ ಶೀಲವಂತ, ಪಂಚಾಕ್ಷರಿ ಹಿರೇಮಠ, ಮಲ್ಲಿನಾಥ ಹಿರೇಮಠ, ಸೂರ್ಯಕಾಂತ ಶೀಲವಂತ, ಚಂದ್ರಶೇಖರ ಪಾಟೀಲ್, ಎಂ.ಕೆ.ನಂದಿ ಇತರರಿದ್ದರು.
ರಮೇಶ ರಾಜೋಳೆ ನಿರೂಪಣೆ ಮಾಡಿದರು. ರಾಜಶ್ರೀ ಸ್ವಾಮಿ ಪ್ರಾರ್ಥನಾ ಗೀತೆ, ರುದ್ರೇಶ್ವರ ಗೋರ್ಟಾ ಮಹಾಮಂಗಳ ಗೀತೆ ಹಾಡಿದರು.
ವಿಶ್ವದ ಕಲ್ಯಾಣ ಬಯಸಿದ ಆಧ್ಯಾತ್ಮಿಕ ನೆಲ ಕಲ್ಯಾಣ. ಇಲ್ಲಿ ನಡೆಯುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮ ಐತಿಹಾಸಿಕವಾಗಿ ಜರುಗಲಿದೆ. ಎಲ್ಲರೂ ತನು, ಮನ, ಧನದಿಂದ ಕಾರ್ಯನಿರ್ವಹಿಸಬೇಕು. ಗುರುಗಳ ಆಶೀರ್ವಾದ ಎಂಬ ಕಿರಣ ಮೈಮೇಲೆ ಬಿದ್ದಾಗ ಜೀವನ ಅರಳುತ್ತದೆ.
| ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ
ಕಲ್ಯಾಣದಲ್ಲಿ ನಡೆಯುವ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ್ ಐತಿಹಾಸಿಕ ಸಮಾರಂಭವಾಗಬೇಕು. ಧರ್ಮ ಉಳಿಸುವ, ಬೆಳೆಸುವ ಸಮಾರಂಭ ಇದಾಗಿದ್ದು, ಧರ್ಮ ಸಂದೇಶ ದೇಶಕ್ಕೆ, ಮನೆ- ಮನಗಳಿಗೆ ತಲುಪಬೇಕು. ಇದರ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು.
| ಶರಣು ಸಲಗರ ಶಾಸಕ