ಬಸವಕಲ್ಯಾಣದಲ್ಲಿ ತೆರೆದ ವಾಹನದಲ್ಲಿ ನಿರ್ಮಿಸಿದ ಅಲಂಕೃತ ಮಂಟಪದೊಳಗೆ ಲಕ್ಷ್ಮೀ-ವೆಂಕಟೇಶ ಹಾಗೂ ಗುರು ಬಸವಣ್ಣನವರ ಮೂರ್ತಿಯೊಂದಿಗೆ ನಡೆದ ಬಸವೇಶ್ವರ ಚೌಕ್ ಗಣೇಶ ಮೂರ್ತಿ ಮೆರವಣಿಗೆ. 
ಜಿಲ್ಲೆ

ಕಲ್ಯಾಣದಲ್ಲಿ ಗಣಪನಿಗೆ ಭಕ್ತಿಯ ವಿದಾಯ

ಬಸವಕಲ್ಯಾಣ: ನಗರದಲ್ಲಿ ಗಣೇಶೋತ್ಸವ ನಿಮಿತ್ತ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ ಅದ್ದೂರಿ ಜತೆಗೆ ಭಕ್ತಿಭಾವದೊಂದಿಗೆ ಜರುಗಿತು. ಮೆರವಣಿಗೆಗೆ ಮುಸ್ಲಿಂ ಸಮುದಾಯದವರಿಂದ ದೊರೆತ ಸ್ವಾಗತ ಸೌಹಾರ್ದದ ಮೆರುಗು ನೀಡಿತು.

ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಭಾನುವಾರ ಬೆಳಗ್ಗಿನ ಜಾವ ೨ರ ಸುಮಾರಿಗೆ ಶುರುವಾದ ಮೆರವಣಿಗೆಯಲ್ಲಿ ೧೫ಕ್ಕೂ ಹೆಚ್ಚು ಮೂರ್ತಿಗಳಿಗೆ ಗಣಪತಿ ಬಪ್ಪಾ ಮೋರಯಾ ಪುಡಚ್ಯಾ ವರ್ಷಿ ಲೌಕರ್ ಯಾ ಎಂದು ಭಕ್ತಿಪೂರ್ವಕ ವಿದಾಯ ಹೇಳಲಾಯಿತು.

ಝಗಮಗಿಸುವ ಬಣ್ಣ-ಬಣ್ಣದ ವಿದ್ಯುತ್ ದೀಪದ ಬೆಳಕಿನಲ್ಲಿ ಡಿಜೆ ಸೌಂಡ್, ಎಲ್‌ಇಡಿ ವಾಲ್‌ ಸ್ಕ್ರೀನ್​, ಭಕ್ತಿ ಸಂಗೀತದ ಅಲೆಯಲ್ಲಿ ಗಣೇಶನ ಜೈ ಜೈಕಾರ ಮೊಳಗಿತು. ಮೆರವಣಿಗೆಯುದಕ್ಕೂ ಯುವ ಸಮೂಹ ಭಕ್ತಿ-ಭಾವದಲ್ಲಿ ಮೈಮೆರೆತು ದಣಿವರಿಯದೆ ಕುಣಿದು ಕುಪ್ಪಳಿಸಿದ್ದು ಗಮನ ಸೆಳೆಯಿತು.

ಬಸವೇಶ್ವರ ಚೌಕ್, ಶಾಪುರಗಲ್ಲಿ, ಹೊಸಪೇಟೆ ಗಲ್ಲಿ, ಗಾಂಧಿ ಚೌಕ್, ಮದಲಾ ಮಾರುತಿ, ಪಟೇಲ್ ಚೌಕ್ (ಭವಾನಿ ಮಂದಿರ), ಗೋಲಚೌಡಿ, ಈಶ್ವರ ನಗರ, ಧರ್ಮಪ್ರಕಾಶ ಗಲ್ಲಿ, ಕಾಳಿ ಗಲ್ಲಿ, ಕುಂಬಾರಪಳ್ಳಿ, ರಜಪುತ ಗಲ್ಲಿ, ಸುಭಾಷ ಚೌಕ್, ಬನಶಂಕರಿ ಗಲ್ಲಿಗಳಲ್ಲಿನ ಮೂರ್ತಿಗಳು ಸಾಮೂಹಿಕ ಮೆರವಣಿಯಲ್ಲಿದ್ದವು.

ವಿವಿಧೆಡೆಯ ಮೂರ್ತಿಗಳು ಮೆರವಣಿಗೆಗೆ ಸಿದ್ಧಗೊಂಡು ಕೋಟೆ ಬಳಿ ಬರಲು ಬೆಳಗ್ಗಿನ ಜಾವ ಎರಡು ಗಂಟೆಯಾಗಿತ್ತು. ಹೀಗಾಗಿ ೫ರ ಸುಮಾರಿಗೆ ಗಾಂಧಿ ವೃತ್ತಕ್ಕೆ ತಪುಪಿತು. ಮುಖ್ಯ ರಸ್ತೆ ಬದಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ವೀಕ್ಷಿಸಿದರು.

ಮೆರವಣಿಗೆ ಶಾಂತ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಆಯ್ದ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಹಿರಿಯ ಅಧಿಕಾರಿಗಳು ನಿಗಾ ಇರಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಡಿಎಆರ್, ಕೆಎಸ್‌ಆರ್‌ಪಿ ತುಕಡಿಗಳನ್ನು ತೈನಾತುಗೊಳಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಗರಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು. ಹುಮನಾಬಾದ್ ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಅಲಿಸಾಬ್, ಪಿಎಸ್‌ಐ ಚಂದ್ರಶೇಖರ, ಕೃಷ್ಣಕುಮಾರ ಪಾಟೀಲ್, ಗುರು ಪಾಟೀಲ್, ಶ್ರೀನಿವಾಸ ಅಲ್ಲಾಪುರೆ, ಆನಂದರಾವ, ಮಹೇಶ ಪಾಟೀಲ್, ಜಯಶ್ರೀ ಹೊಡೆಲ್, ಸಿದ್ದೇಶ್ವರ ಇತರರು ಬಂದೋಬಸ್ತ್​ನಲ್ಲಿ ತೊಡಗಿದ್ದರು. ಬೆಳಗ್ಗಿನ ಜಾವ ಗಾಂಧಿ ವೃತ್ತದ ಬಳಿ ಪೊಲೀಸ್ ಇಲಾಖೆಯಿಂದ ಗಣೇಶ ಮಂಡಳಿ ಅಧ್ಯಕ್ಷರು ಮತ್ತು ಪ್ರಮುಖರನ್ನು ಸನ್ಮಾನಿಸಲಾಯಿತು.

ಮುಸ್ಲಿಂ ಸಮುದಾಯದಿಂದ ಸ್ವಾಗತ: ಗಣೇಶ ವಿಸರ್ಜನೆ ಮೆರವಣಿಗೆಯನ್ನು ಮುಸ್ಲಿಂ ಸಮುದಾಯದಿಂದ ಸ್ವಾಗತಿಸಿ ಸಿಹಿ ತಿನ್ನಿಸುವ ಮೂಲಕ ಪರಸ್ಪರ ವಿಶ್ವಾಸ ಮತ್ತು ಸೌಹಾರ್ದ ಸಂದೇಶ ಸಾರುವ ಪ್ರಯತ್ನಕ್ಕೆ ಕೋಟೆ ಸಾಕ್ಷಿಯಾಯಿತು.

ಶುಕ್ರವಾರ ಈದ್ ಮಿಲಾದ್ ಮೆರವಣಿಗೆಗೆ ಗಣೇಶ ಮಂಡಳದವರಿಂದ ಕೋಟೆ ಬಳಿ ವೇದಿಕೆ ನಿರ್ಮಿಸಿ ಸ್ವಾಗತಿಸಲಾಗಿತ್ತು. ಇದೇ ಸ್ಥಳದಲ್ಲಿ ಏಕತಾ ಮಂಚ್ ಹೆಸರಿನಲ್ಲಿ ಮುಸ್ಲಿಮರಿಂದ ನಿರ್ಮಿಸಿದ ವೇದಿಕೆಯಲ್ಲಿ ವಿಸರ್ಜನೆ ಮೆರವಣಿಗೆ ತಡರಾತ್ರಿ ಕೋಟೆ ಬಳಿ ಬಂದಾಗ ವಸುಧೈವ ಕುಟುಂಬಕಂ ಎಂಬ ಘೋಷವಾಕ್ಯದ ಬ್ಯಾನರ್ ಅಳವಡಿಸಿ ಭವ್ಯ ಸ್ವಾಗತ ಕೋರಿ ಮಂಡಳದವರನ್ನು ಸನ್ಮಾನಿಸಿ ಸಿಹಿ (ಲಡ್ಡು) ತಿನ್ನಿಸಿದರು.

ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಅಲಿಸಾಬ್ ಮಾತನಾಡಿ, ಪರಸ್ಪರ ಸಹಕಾರದಿಂದ ಎರಡೂ ಸಮುದಾಯವದವರು ಹಬ್ಬ ಆಚರಿಸಿ ಸೌಹಾರ್ದತೆ ಸಂದೇಶ ಸಾರಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖರಾದ ಮಕ್ದುಮ್ ಮೋಹಿಯೊದ್ದೀನ್, ಅಮೀರ್ ಸೇಠ, ರಬ್ಬಾನಿ ಬಾಗ್, ಇಲಿಯಾಸ್ ಖುರೇಶಿ, ಗಫಾರ್ ಪೇಶಮಾಮ್, ಎಜಾಜ್ ಲಾತುರೆ, ಅನ್ವರ್ ಭೋಸಗೆ, ವಾಜೀದ್ ಕಬಾಡಿ, ಹುಜೂರ್ ಪಾಶಾ, ಎಂ.ಡಿ. ರೈಸುದ್ದೀನ್, ಮಿನಾಜ್ ನವಾಬ್ ಇತರರಿದ್ದರು.

ಗಣೇಶ ಮಂಡಳದ ಪ್ರಮುಖರಾದ ಯುವರಾಜ ಭೆಂಡೆ, ಸಂದೀಪ ಬುಯೆ, ನಿಲೇಶ ಖೂಬಾ, ಕಿರಣ ಆರ್ಯ, ಸಂತೋಷ ಸಾಳುಂಕಿ, ಶಿವಕುಮಾರ ಸ್ವಾಮಿ, ಸಂಗಮೇಶ ಚುಡೆ, ಸಿದ್ದು ಬೋರಗೆ, ಶಂಭು ಕನಾಡೆ, ಅಕ್ಷಯ ಗರ್ಜೆ, ಮಲ್ಲಿಕಾರ್ಜುನ ಭೆಂಡೆ, ಚಂದ್ರಕಾಂತ ಮೇತ್ರೆ, ಸಾಗರ ಮೇತ್ರೆ, ಶ್ರೀಕಾಂತ ತಾಂದಳೆ, ಸೋನುಸಿಂಗ್ ಹಜಾರಿ, ವಿರೇಶ ಮಾಮಾ, ರಮೇಶ ವಂಕೆ, ರಾಜು ಸುಣಗಾರ ಇತರರನ್ನು ಸನ್ಮಾನಿಸಲಾಯಿತು.