ಬಸವಕಲ್ಯಾಣ: ನಗರದ ಹರ್‌ಹರ್ ವಟಕೇಶ್ವರ ಮಹಾದೇವ ಗ್ರೂಪ್ ಹಾಗೂ ಶಿವಭಕ್ತರ ಸಹಯೋಗದಲ್ಲಿ ಬುಧವಾರ ಜರುಗಿದ ವೈಭವದ ಕಾವಡ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಶಿವಭಕ್ತರು ಭಾಗವಹಿಸಿದ್ದರು.
ಸಸ್ತಾಪುರ ಬಂಗ್ಲಾ ಸಮೀಪದ ಐತಿಹಾಸಿಕ ಬಂದವರ ಓಣಿಯಿಂದ ಮುಖ್ಯರಸ್ತೆ ಮಾರ್ಗವಾಗಿ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದವರೆಗೆ ನಡೆದ ಯಾತ್ರೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಶಿವಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಂದವರ ಓಣಿಯಲ್ಲಿ ತಾಮ್ರದ ಸಣ್ಣ ಬಿಂದಿಗೆಗಳಲ್ಲಿ ಪವಿತ್ರ ನೀರು ಸಂಗ್ರಹಿಸಿ ಕಟ್ಟಿಗೆಯ ಎರಡು ಭಾಗಕ್ಕೆ (ತಕ್ಕಡಿ ಮಾದರಿಯಲ್ಲಿ) ಕಟ್ಟಿಕೊಂಡು ಹೆಗಲ ಮೇಲಿಟ್ಟುಕೊಂಡು ಶಿವಭಕ್ತರು ಹೆಜ್ಜೆ ಹಾಕಿದರು. ಇನ್ನು ಅನೇಕರು ಭಜನೆ ಮಾಡುತ್ತ ಮುಂದೆ ಸಾಗಿದರು.
ಕುಂಭ-ಕಳಸ, ತೆರೆದ ವಾಹನದಲ್ಲಿ ಶಿವನ ಮೂರ್ತಿಯೊಂದಿಗೆ ನಡೆದ ಯಾತ್ರೆಯಲ್ಲಿ ಶಿವಭಕ್ತಿ ಗೀತೆಯೊಂದಿಗೆ ಹರ್ ಹರ್ ಮಹಾದೇವ ಘೋಷಣೆಗಳು ಮಾರ್ದನಿಸಿದವು. ಬಹುತೇಕ ಜನರು ಕೇಸರಿ ಶಲ್ಯ, ಟೊಪ್ಪಿಗೆ ಧರಿಸಿದ್ದರು. ಏಕ್ ಲೋಟಾ ಜಲ್ ಸಾರೆ ಸಮಸ್ಯಾಕಾ ಹಲ್(ಒಂದು ತಂಬಿಗೆ ನೀರು ಎಲ್ಲ ಸಮಸ್ಯೆಗಳಿಗೆ ಪರಿಹಾರ) ಘೋಷ್ಯ ವಾಕ್ಯ ಯಾತ್ರೆಯಲ್ಲಿ ಗಮನ ಸೆಳೆಯಿತು.
ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠಕ್ಕೆ ಯಾತ್ರೆ ತಲುಪಿದ ನಂತರ ಮಠದ ಪರಿಸರದಲ್ಲಿರುವ ಶ್ರೀ ಮಹಾದೇವನಿಗೆ ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಯಾತ್ರೆಯಲ್ಲಿ ಮಹಿಳೆಯರು, ಯುವಕರು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿವಭಕ್ತಿಗೆ ಮೆರೆದರು.
ತ್ರಿಪುರಾಂತ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಗ್ರೂಪ್‌ನ ಅಧ್ಯಕ್ಷ ಕೃಷ್ಣಾರೆಡ್ಡಿ ಪೊಲೀಸ್ ಪಾಟೀಲ್, ವಿಜಯಕುಮಾರ ಕನಾಡೆ, ಸುಮೀತ ಶಿವಣಗೆ, ವೀರಶೆಟ್ಟಿ ಬಾಲಕುಂದಾ, ನಿಲೇಶ ಖೂಬಾ, ಗುರುಬಸವಾ ಚನ್ನಮಲ್ಲೆ, ವೈಭವ ಗೋಸ್ವಾಮಿ, ಸತೀಶ ಸ್ವಾಮಿ, ಹುಲೆಪ್ಪ ದೇಗಲೂರೆ, ಮಲ್ಲಪ್ಪ ಸಾಂಡೆ, ಚನ್ನವೀರ ಸ್ವಾಮಿ, ನಾಗಪ್ಪ ತುಗಾಂವೆ, ಸಂಜುಕುಮಾರ ಹೇಮಾ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಬಜರಂಗ ದಳ ತಾಲೂಕು ಸಂಚಾಲಕ ರವಿ ನಾವದ್ಗೆಕರ್, ಬಿಜೆಪಿ ತಾಲೂಕು ಅಧ್ಯಕ್ಷ ಗ್ಯಾನೇಶ್ವರ ಮುಳೆ, ಮುಖಂಡರಾದ ದೀಪಕ ಗಾಯಕವಾಡ, ಅರವಿಂದ ಮುತ್ತೆ, ಕೃಷ್ಣಾ ಗೋಣೆ, ಶಿವಕುಮಾರ ಅಗ್ರೇ ಇತರರು ಭಾಗವಹಿಸಿದ್ದರು.
ದರ್ಶನ: ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳಿ ಶ್ರೀ ಸದ್ಗುರು ಸದಾನಂದ ಮಠದಲ್ಲಿ ಆಗಮಿಸಿದ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಬಂಡೆಪ್ಪ ಮೇತ್ರೆ, ವೀರಣ್ಣ, ಪಾಟೀಲ್, ರಜನ್ ಚೌದರಿ, ಗುರುನಾಥ ದುರ್ಗೆ ಇದ್ದರು.