ಬಸವಕಲ್ಯಾಣ: ಮನುಷ್ಯ ಸೇರಿ ಇಡೀ ಜೀವ ಸಂಕುಲದ ಸುರಕ್ಷತೆಗೆ ನೆಲ, ನೀರು, ಕಾಡು ಸಂರಕ್ಷಣೆ ಮಾಡುವುದು ಅಗತ್ಯವಾಗಿದ್ದು, ಇದು ಎಲ್ಲರ ಹೊಣೆಗಾರಿಕೆಯೂ ಆಗಿದೆ ಎಂದು ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮಣ್ಣು -ನೀರು - ಸಾಂಸ್ಕೃತಿಕ ಸಂಕಥನ' ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾರಿತ್ರ್ಯಿಕ ಹಾಗೂ ಸಾಂಸ್ಕೃತಿಕ ಮಹತ್ವ ಪಡೆದ ಕಲ್ಯಾಣದಲ್ಲಿ ಹಳೆಯ ಕಾಲದ ೪೪೦ಕ್ಕೂ ಹೆಚ್ಚು ಬಾವಿಗಳಿವೆ. ನೀರನ್ನು ಹಿಡಿದಿಡುವ ವಿಶಿಷ್ಟ ಗುಣ ಕಲ್ಯಾಣದ ಮಣ್ಣಿಗಿದೆ. ಕಲ್ಯಾಣಿ ಎಂದರೆ ನೀರಿನ ಸೆಲೆಯಿರುವ ಸ್ಥಳ ಎಂದರ್ಥ ಎಂದರು.
ಬರಿದಾಗುತ್ತಿರುವ ಕಾಡಿನಿಂದಾಗಿ ಜೀವಜಾಲ ವಿನಾಶದ ಅಂಚಿಗೆ ತಲುಪಿದೆ. ನಮ್ಮೆಲ್ಲರ ನಿರ್ಲಕ್ಷ್ಯದಿಂದ ನಿಸರ್ಗಕ್ಕೆ ಹಾನಿಯಾಗುತ್ತಿದೆ. ಕಾಡು ಸಂರಕ್ಷಿಸುವ ಕಡೆಗೆ ಕೇಂದ್ರಿಕರಿಸದಿದ್ದರೆ ಜೀವವೈವಿಧ್ಯ ನಾಶವಾಗುತ್ತದೆ. ಅಂತರ್ಜಲದ ಮಟ್ಟ ಹೆಚ್ಚಿಸುವ, ಮಣ್ಣಿನ ಫಲವತ್ತತೆ ಕಾಪಾಡುವ, ಜೀವವೈವಿಧ್ಯ ಉಳಿಸಲು ಕಾಡು ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದ್ದು, ಇದನ್ನು ಕಾಳಜಿಯಿಂದ ನಿಭಾಯಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಸರ್ಕಾರ ಹಲವು ಯೋಜನೆಗಳು ಹಾಕಿಕೊಂಡಿದೆ. ನಿಸರ್ಗದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಿಸರ್ಗ ಉಳಿದರೆ ಎಲ್ಲ ಜೀವಿಗಳ ಉಳಿವಿದೆ. ಇಲ್ಲದಿದ್ದರೆ ಎಲ್ಲಾ ಜೀವಿಗಳ ಅಳಿವು ನಿಶ್ಚಿತ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಆಧುನಿಕತೆ, ಜಾಗತೀಕರಣ, ನಗರೀಕರಣಗಳು ಬೆಳೆದಂತೆ ಮನುಷ್ಯ ನಿಸರ್ಗ ಸಹಜ ಅನುಭವ, ಪ್ರಕೃತಿಯ ವಿಸ್ಮಯ, ಕೌತುಕಗಳಿಂದ ದೂರವಾಗುತ್ತಿದ್ದಾನೆ. ಅನ್ನಕ್ಕೆ, ಆರಾಧನೆಗೆ ಕೇಂದ್ರವಾಗಿದ್ದ ನೆಲ ಇಂದು ಸರಕಾಗಿ ಪರಿವರ್ತಿತವಾಗಿದೆ. ವ್ಯಾವಹಾರಿಕ ಮನೋಭಾವ ಬೆಳೆದಂತೆಲ್ಲ ನೆಲ, ನೀರು, ಕಾಡನ್ನು ವಾಣಿಜ್ಯ ಮತ್ತು ವ್ಯಾಪಾರದ ಚೌಕಟ್ಟಿಗೆ ತಂದು ನಿಲ್ಲಿಸಿದ್ದು ಈ ಕಾಲದ ಬಹುದೊಡ್ಡ ದುರಂತ ಎಂದು ಹೇಳಿದರು.
ಬೀದರ ಟೀಮ್ ಯುವ ಸದಸ್ಯರಾದ ಹರ್ಷವರ್ಧನ ರಾಠೋಡ್, ಆಧವನ್, ಗೋಕುಲ್, ಚಿನ್ಮಯ್, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಅಶೋಕರೆಡ್ಡಿ, ಎಂಡಿ ಜಬಿ, ಬಸವರಾಜ ಗುಂಗೆ ಇತರರಿದ್ದರು. ಡಾ. ಶಾಂತಲಾ ಪಾಟೀಲ ಸ್ವಾಗತಿಸಿದರು. ನಾಗವೇಣಿ ಬಿರಾದಾರ ವಂದಿಸಿದರು. ಗಂಗಾಧರ ಸಾಲಿಮಠ ನಿರೂಪಣೆ ಮಾಡಿದರು.