ಜಿಲ್ಲೆ

ಕಲ್ಯಾಣದ ಕ್ರಾಂತಿ ಜಗತ್ತಿಗೆ ಮಾದರಿ

ಚಾಮರಾಜನಗರ: ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಮೊಟ್ಟಮೊದಲಿಗೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಬಸವೇಶ್ವರರು ಕಲ್ಯಾಣದಲ್ಲಿ ಮಾಡಿದ ಕ್ರಾಂತಿ ಜಗತ್ತಿನಲ್ಲೇ ಮಾದರಿಯಾಗಿದೆ ಎಂದು ಸಂಸದ ಸುನೀಲ್ ಬೋಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಚಿಕ್ಕವಯಸ್ಸಿನಲ್ಲೇ ಸಮಾಜದ ಮೌಢ್ಯ ಮತ್ತು ಸ್ತ್ರೀ ಅಸಮಾನತೆ ವಿರುದ್ಧ ಪ್ರಶ್ನೆ ಮಾಡಿದರು. 12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಸಂದರ್ಭದಲ್ಲಿ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ ವ್ಯವಸ್ಥೆಯ ವಿರುದ್ಧ ಜನರಿಗೆ ಮನದಟ್ಟು ಮಾಡಿದರು. ನಿರಂತರವಾಗಿ ಅಸಮಾನತೆಯ ವಿರುದ್ಧ ಹೋರಾಟ ಮಾಡಿದರು ಎಂದರು.

ಕಲ್ಯಾಣದಲ್ಲಿ ಬಿಜ್ಜಳನ ಮಂತ್ರಿಯಾಗಿದ್ದ ಬಸವಣ್ಣನವರು ಅಂತರ್ಜಾತಿ ವಿವಾಹವನ್ನು ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದರು. ಈ ಸಂದರ್ಭದಲ್ಲಿ ತನ್ನ ಮಂತ್ರಿ ಸ್ಥಾನವನ್ನು ದಿಕ್ಕರಿಸಿ ಹೋಗುತ್ತಾರೆ. ಬಳಿಕ ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಾರಿದರು. ತನ್ನ ದೇಹವೇ ದೇಗುಲ ಎನ್ನುವ ಮೂಲಕ ಸುಲಭವಾಗಿ ದೇವರನ್ನು ಕಾಣುವಂತೆ ಮಾಡಿದರು ಎಂದು ಹೇಳಿದರು.

ಬುದ್ಧ, ಬಸವೇಶ್ವರರು, ಕನಕದಾಸರು ಹಾಗೂ ಅಂಬೇಡ್ಕರ್ ಅವರಂತಹ ಮಹನೀಯರು ಸಮಾನತೆಯ ಪರವಾಗಿ ಹೋರಾಟ ಮಾಡಿದ್ದಾರೆ. ಅವರು ಹಾಕಿಕೊಟ್ಟ ಆದರ್ಶಗಳನ್ನು ನಾವು ಅನುಸರಣೆ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ನಮಗೆ ನಾವೇ ವಿಮರ್ಶೆ ಮಾಡಿಕೊಂಡು, ಜೀವನದುದ್ದಕ್ಕೂ ಬಸವಣ್ಣನವರ ಸಂದೇಶವನ್ನು ಪಾಲನೆ ಮಾಡಬೇಕಿದೆ ಎಂದರು.

ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠದ ಪೀಠಾಧ್ಯಕ್ಷ ಶ್ರೀಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆ ಸದಸ್ಯೆ ಕಲಾವತಿ ರವಿಕುಮಾರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯದ ಸಂಪತ್ತಿನ ಸಂಕೇತ:

ನಮ್ಮ ಜನಪದರು ಸಾಂಸ್ಕೃತಿಕ ನಾಯಕ ಬಸವಣ್ಣ ಅವರನ್ನು ರಾಜ್ಯದ ಸಂಪತ್ತಿನ ಸಂಕೇತವಾಗಿ ಗುರುತಿಸಿದ್ದರು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಸದಾಶಿವ ಮೂರ್ತಿ ಹೇಳಿದರು. ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದ ಕಾರಣಕ್ಕೆ ಸಾಂಸ್ಕೃತಿಕ ನಾಯಕ ಎಂದು ಕರೆಯುವುದರಲ್ಲಿ ನಾವು ಹೆಮ್ಮೆ ಪಡಬೇಕಿದೆ. ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರು ಮಾಡಿದ ಬದಲಾವಣೆ ಇಡೀ ಜಗತ್ತಿಗೆ ಅನ್ವಯಿಸುತ್ತದೆ. ತಮ್ಮಯ 1500 ಕ್ಕೂ ಹೆಚ್ಚಿನ ವಚನಗಳಲ್ಲಿ ಕಾಯಕ, ದಾಸೋಹ, ಅಸಮಾನತೆ, ದಲಿತರ ಉನ್ನತಿ, ಸ್ತ್ರೀ ಸಮಾನತೆ, ಭ್ರಷ್ಟಾಚಾರ ವಿರೋಧಿ, ಕಲ್ಯಾಣ ರಾಜ್ಯದ ನಿಲುವಿನ ಕುರಿತು ಬೆಳಕನ್ನು ಚೆಲ್ಲಿದ್ದಾರೆ. ಅವರ ಕಾಯಕ ಸೂತ್ರ ನಾಡಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇವತ್ತು ಎಲ್ಲಾ ರಾಷ್ಟ್ರಗಳ ಮುಖ್ಯ ಗುರಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸುವುದಾಗಿದ್ದು, ಈ ನಿಟ್ಟಿನಲ್ಲಿ ಬಸವಣ್ಣನವರ ಕಾಯಕ, ದಾಸೋಹ, ಅಸಂಗ್ರಹ, ಸಮಸಮಾಜ ಸಿದ್ಧಾಂತ ಅತ್ಯಂತ ಅಗತ್ಯವಾಗಿದೆ. ವೈಚಾರಿಕತೆ ಮತ್ತು ವಿಜ್ಞಾನದ ನೆಲೆಗಟ್ಟಿನಲ್ಲೂ ತಮ್ಮ ಚಿಂತನೆಗಳನ್ನು ಸಾರುವ ಮೂಲಕ ನಾಡಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ ಎಂದು ಹೇಳಿದರು.

ಅದ್ಧೂರಿಯಾಗಿ ನಡೆದ ಮೆರವಣಿಗೆ:

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಶ್ರೀಬಸವೇಶ್ವರರ ಅಶ್ವರೂಢ ಪ್ರತಿಮೆಗೆ ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಶ್ರೀಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಸಾಗಿದ ಮೆರವಣಿಗೆ ಬಿ.ರಾಚಯ್ಯ ಜೋಡಿರಸ್ತೆ, ಶ್ರೀಭುವನೇಶ್ವರಿವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಮೂಲಕ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅಂತ್ಯವಾಯಿತು. ನಂದಿಧ್ವಜ ಕುಣಿತ, ವೀರಗಾಸೆ, ಚೆಂಡೆ ವಾದನ, ಡೊಳ್ಳು ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾ ತಂಡಗಳು ಮರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ಈ ವೇಳೆ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀಮುರುಘಾ ರಾಜೇಂದ್ರ ಸ್ವಾಮೀಜಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಮುಖಂಡ ಬಿ.ಕೆ.ರವಿಕುಮಾರ್, ಅಮ್ಮನಪುರ ಮಲ್ಲೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತಿಮೆ ಮುಂಭಾಗ ಸೆಲ್ಫಿ:

ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣ ಮಾಡಿರುವ ಅಶ್ವರೂಢ ಶ್ರೀಬಸವೇಶ್ವರರ ಪ್ರತಿಮೆ ಮುಂಭಾಗ ಸೆಲ್ಫಿ ತೆಗೆದುಕೊಂಡರು. ವಿವಿಧ ಗ್ರಾಮಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಸವಾಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳು ಮುಂದಾಗುತ್ತಿದ್ದರು. ಯುವಕರು ಹೆಚ್ಚಿನ ಸಂಖ್ಯೆ ಪ್ರತಿಮೆಯ ಪೋಟೋ, ವಿಡಿಯೋ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದಿತು.

ವಿವಿಧ ಕಡೆಗಳಲ್ಲಿ ಅನ್ನಸಂತರ್ಪಣೆ:

ಶ್ರೀಬಸವೇಶ್ವರರ ಜಯಂತಿ ಅಂಗವಾಗಿ ಮೆರವಣಿಗೆ ಸಾಗುವ ವಿವಿಧ ಕಡೆಗಳಲ್ಲಿ ಅನ್ನಸಂತರ್ಪಣೆ, ಕುಡಿಯುವ ನೀರು, ಮಜ್ಜಿಗೆ, ಪಾನಕ ಹಾಗೂ ಸಿಹಿ ವಿತರಣೆ ಮಾಡಲಾಯಿತು. ಬಿಸಿಲಿನಿಂದ ಬಸವಲಿದಿದ್ದ ಬಸವಾಭಿಮಾನಿಗಳು ಅಲ್ಲಲ್ಲಿ ಮಜ್ಜಿಗೆ, ಪಾನಕ ಸವಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠ ಹಾಗೂ ಪೇಟೆಪ್ರೈಮರಿ ಶಾಲಾ ಆವರಣದನ್ನು ಪ್ರಸಾದ ವಿನಿಯೋಗ ಮಾಡಲಾಯಿತು.