ಜಿಲ್ಲೆ

ಕಲ್ಯಾಣ ಕರ್ನಾಟಕ ಸ್ತ್ರೀಯರ ಏಳಿಗೆಗೆ ಸಂಕಲ್ಪ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹತ್ತಾರು ಯೋಜನೆಗಳ ಮೂಲಕ ಕಲ್ಯಾಣ ಕರ್ನಾಟಕದ ಸ್ತ್ರೀ ಸಂಕುಲದ ಏಳಿಗೆಗೆ ಸಂಕಲ್ಪ ಮಾಡಲಾಗಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ನಿಗಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ನಲ್ಲಿ 171 ಕೋಟಿ ರೂ. ಅನುದಾನ ಒದಗಿಸಿದ್ದು, ಸ್ತ್ರೀಶಕ್ತಿ ಸಂಘಗಳಿಗೆ 20 ಲಕ್ಷ ರೂ.ವರೆಗೆ ಸಾಲಸೌಲಭ್ಯ ಹೆಚ್ಚಿಸಲಾಗಿದೆ. ಇದಕ್ಕಾಗಿ 20 ಕೋಟಿ ರೂ. ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕದ 119 ಮಹಿಳೆಯರಿಗೆ ಸಮೃದ್ಧಿ ಯೋಜನೆ ಅಡಿ ಸೌಲಭ್ಯ ಕಲ್ಪಿಸಲಾಗಿದೆ. ನಿಗಮದ ಅಧ್ಯಕ್ಷ ಸ್ಥಾನ ಈ ಭಾಗದ ಮಹಿಳೆಗೆ ದೊರೆತಿದ್ದು, ಕಲ್ಯಾಣ ಕರ್ನಾಟಕದ ಮಹಿಳೆಯರ ಒಟ್ಟಾರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಟೆಂಗಳಿ ಹೇಳಿದ್ದಿಷ್ಟು. ಈ ಭಾಗದ ಎಷ್ಟೋ ಮಹಿಳೆಯರಿಗೆ ನಿಗಮದಲ್ಲಿ ದೊರೆಯುವ ಸೌಲಭ್ಯದ ಮಾಹಿತಿ ಇಲ್ಲ. ಹೀಗಾಗಿ ಜಿಲ್ಲಾವಾರು ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಕಿರುಸಾಲ ಯೋಜನೆ ಅಡಿ 2 ಲಕ್ಷದಿಂದ 20 ಲಕ್ಷ ರೂ. ಸಾಲಸೌಲಭ್ಯ ನೀಡಬಹುದು. 298 ಜನರಿಗೆ ಇದರ ಲಾಭ ಒದಗಿಸಲಾಗಿದೆ. ಎಲ್ಐಸಿ ಮೂಲಕ ಫಲಾನುಭವಿಗಳಿಗೆ ವಿಮೆ ಸೌಲಭ್ಯ ಮತ್ತು ಮಾಜಿ ದೇವದಾಸಿಯರ ಆಧಾರ್ ನಂಬರ್ ಜೋಡಣೆ ಮಾಡುವ ಚಿಂತನೆ ನಡೆದಿದೆ.
ದೇವದಾಸಿ ಪುನರ್ವಸತಿ ಯೋಜನೆಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು 18 ಎಕರೆ ಜಮೀನು ನೀಡಿದ್ದು, ಗುಲ್ಬರ್ಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ 5 ಎಕರೆ ಜಮೀನು ನೀಡುವಂತೆ ಕೋರಲಾಗುವುದು.
ರಾಜ್ಯದಲ್ಲಿ ಸುಮಾರು 50 ಸಾವಿರ ದೇವದಾಸಿಯರಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ 1466 ಇದ್ದಾರೆ. ಈ ಜನರ ಪ್ರಗತಿಗೆ 8.30 ಕೋಟಿ ರೂ. ಬಿಡುಗಡೆ ಮಾಡಿದ್ದು, 4.49 ಕೋಟಿ ರೂ. ಖರ್ಚಾಗಿದೆ. ಇದರಲ್ಲಿ 450 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದಾರೆ. ಬಳ್ಳಾರಿ ಮತ್ತು ಕೋಲಾರದಲ್ಲಿ ಶೇಂಗಾ ಚಿಕ್ಕಿ ಘಟಕವಿದ್ದು, 280 ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿದೆ. ಕಲಬುರಗಿಯಲ್ಲೂ ಈ ಘಟಕ ಸ್ಥಾಪನೆಗೆ ಮಹಿಳೆಯರನ್ನು ಪ್ರೋತ್ಸಾಹಿಸಲಾಗುತ್ತಿದೆ.
45 ವರ್ಷ ಮೀರಿದ ಮಾಜಿ ದೇವದಾಸಿಯರಿಗೆ 1500 ರೂ. ಮಾಸಾಶನ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ 2 ಲಕ್ಷ ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 1.75 ಲಕ್ಷ ರೂ. ವೆಚ್ಚದಲ್ಲಿ ವಸತಿಸೌಲಭ್ಯ ಕಲ್ಪಿಸಲಾಗುತ್ತಿದೆ. ದಮನಿತ ಮಹಿಳೆಯರಿಗೆ ಚೇತನಾ ಯೋಜನೆ ಮೂಲಕ ಆರ್ಥಿಕ ನೆರವು, ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್ವಸತಿ, ಕೌಶಲ ತರಬೇತಿ ನೀಡಿ ಅವರಲ್ಲಿ ಉದ್ಯಮಶೀಲತೆ ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೆಂಗಳಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಇತರರಿದ್ದರು.

ರಾಜ್ಯ ಟ್ರಾನ್ಸ್ಜೆಂಡರ್ ನೀತಿ 2017ರಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯಾದ್ಯಂತ ಟ್ರಾನ್ಸ್ಜೆಂಡರ್ ಮೂಲ ಹಂತದ ಸಮೀಕ್ಷೆ 2020-21ರಲ್ಲಿ ನಿಗಮದ ಮೂಲಕ 70 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
| ಶಶಿಕಲಾ ಟೆಂಗಳಿ
ಅಧ್ಯಕ್ಷೆ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ