ನರಗುಂದ: ಮನುಷ್ಯನಿಗೆ ಚಿನ್ನಕ್ಕಿಂತ ಅನ್ನ ಶ್ರೇಷ್ಠವಾದದ್ದು. ಅನ್ನದ ಮಹತ್ವ ಅರಿತು ಪ್ರತಿವರ್ಷ ಮನೆಮನೆಯಿಂದ ಅಕ್ಕಿ ಸಂಗ್ರಹಿಸಿ ಅನಾಥಾಶ್ರಮ, ನಿರ್ಗತಿಕರಿಗೆ ನೀಡುತ್ತಿರುವ ಬೈಲಹೊಂಗಲದ ವಿದ್ಯಾರ್ಥಿಗಳ ಕಾರ್ಯವನ್ನು ಶಾಂತಲಿಂಗ ಶ್ರೀಗಳು ಶ್ಲಾಘಿಸಿದರು.
ಶ್ರೀಮಠದ ದೊರೆಸ್ವಾಮಿ ಉಚಿತ ಪ್ರಸಾದ ನಿಲಯಕ್ಕೆ ಬೈಲಹೊಂಗಲದ ಎ.ವಿ. ಡಮ್ಮಣಗಿ ಸಂಸ್ಥೆಯ ಕಲ್ಪವೃಕ್ಷ ಮಾದರಿ ಶಾಲೆ ಮಕ್ಕಳಿಂದ ಮಂಗಳವಾರ 8 ಕ್ವಿಂಟಾಲ್ ಅಕ್ಕಿ ಸ್ವೀಕರಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿರುವ ಇಂದಿನ ದಿನಮಾನದಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರ ಕಾಯಕ ದಾಸೋಹದ ಪರಿಕಲ್ಪನೆಯಂತೆ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಮನೋಭಾವ ಮೂಡಿಸುತ್ತಿರುವ ಕಲ್ಪವೃಕ್ಷ ಮಹಾವಿದ್ಯಾಲಯದ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.
ಶಿಕ್ಷಕ ಮಾರುತಿ ಶೆಲ್ಲಿಕೇರಿ, ಶಿಕ್ಷಕ ಮಹೇಂದ್ರ ಹೆಗಡೆ ಮಾತನಾಡಿದರು. ಸಂತೋಷ ವಣಿಕಿ, ಶಿಕ್ಷಕಿ ಭಾರತಿ ಹುಲ್ಯಾಳ, ಲಿಂಗರಾಜ ಮೊರಬದ, ಭೀಮಪ್ಪ ಮನೇನಕೊಪ್ಪ ಇತರರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ನಿರ್ವಹಿಸಿದರು.
EndFragment