ಜಿಲ್ಲೆ

ಕಲ್ಪತರುನಾಡಿಗೆ ಕರೊನಾಘಾತ : ಸಿದ್ಧಗಂಗಾಮಠದ 22 ಮಕ್ಕಳಿಗೆ ಕರೊನಾ

Tumakuru

ತುಮಕೂರು : ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 545 ಜನರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಸಿದ್ಧಗಂಗಾಮಠದ 22 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರು ತಾಲೂಕು ಒಂದರಲ್ಲೇ ದಾಖಲೆಯ 255 ಪ್ರಕರಣ ವರದಿಯಾಗಿವೆ.

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 119 ಜನರು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 2484ಕ್ಕೇರಿದೆ. ಇಬ್ಬರನ್ನು ಕರೊನಾ ಬಲಿ ಪಡೆದಿದೆ.

ತುಮಕೂರಿನ ಅಶೋಕನಗರದ 56 ವರ್ಷದ ವ್ಯಕ್ತಿ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಹಾಗೂ ತುಮಕೂರು ತಾಲೂಕು ಊರುಕೆರೆಯ 69 ವರ್ಷದ ವೃದ್ಧೆ ಕರೊನಾದಿಂದ ಮೃತಪಟ್ಟಿದ್ದಾರೆ. ಇನ್ನೂ ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 15 ಹಾಗೂ ಖಾಸಗಿ ಆಸ್ಪತ್ರೆಗಳ ಐಸಿಯುಗಳಲ್ಲಿ 35 ಒಟ್ಟು 50 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಠದ 22 ಮಕ್ಕಳಿಗೆ ಕರೊನಾ: ಸಿದ್ಧಗಂಗಾ ಮಠದ 22 ಮಕ್ಕಳಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಯಾವುದೇ ರೋಗಲಕ್ಷಣಗಳಿಲ್ಲದ ಈ ವಿದ್ಯಾರ್ಥಿಗಳಲ್ಲಿ ಸೋಂಕು ತಗುಲಿರುವುದು ರ‌್ಯಾಂಡಮ್ ಪರೀಕ್ಷೆ ವೇಳೆ ಪತ್ತೆಯಾಗಿದೆ. ಮುನ್ನೆಚ್ಚರಿಕೆಯಾಗಿ ಈ ವಿದ್ಯಾರ್ಥಿಗಳನ್ನು ಮಠದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ 6,7,8,9 ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ತಮ್ಮ ಊರುಗಳಿಗೆ ತೆರಳಿದ್ದು ಮಠದಲ್ಲಿ 1200ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಾತ್ರ ಇದ್ದಾರೆ.

545 ಪ್ರಕರಣ: ಸತತ 4ನೇ ದಿನ ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ದಿನೇದಿನೆ ಕರೊನಾ ಪ್ರಕರಣಗಳ ಸಂಖ್ಯೆ ಏರುಮುಖವಾಗಿದ್ದು ಶುಕ್ರವಾರ ಒಂದೇ ದಿನ 545 ಮಂದಿಗೆ ಸೋಂಕು ದೃಢವಾಗಿದೆ. ಅದರಲ್ಲೂ ಜಿಲ್ಲಾಕೇಂದ್ರ ತುಮಕೂರು ಒಂದರಲ್ಲೇ 255 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎನಿಸಿದೆ.

ಶಿರಾ 41, ಕುಣಿಗಲ್ 35, ತಿಪಟೂರು 34, ಮಧುಗಿರಿ 34, ಕೊರಟಗೆರೆ 34, ಪಾವಗಡ 32, ಗುಬ್ಬಿ 31, ಚಿಕ್ಕನಾಯನಕಹಳ್ಳಿ 29, ಹಾಗೂ ತುರುವೇಕೆರೆ ತಾಲೂಕಿನಲ್ಲಿ 20 ಜನರಿಗೆ ಸೋಂಕು ತಗುಲಿದ್ದು ಒಟ್ಟು 545 ಪ್ರಕರಣಗಳು ದಾಖಲಾಗಿವೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ 28947ಕ್ಕೇರಿದೆ. 25991ಜನ ಕರೊನಾದಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 472ಕ್ಕೇರಿದೆ.

ಬೆಂಗಳೂರಿಗರ ಕಾಟ? : ಪ್ರತಿನಿತ್ಯ ಬೆಂಗಳೂರಿಗೆ ಉದ್ಯೋಗಕ್ಕೆ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ತೆರಳುತ್ತಿದ್ದು ಇದು ಕರೊನಾಘಾತಕ್ಕೆ ಕಾರಣವೇ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮೂಡಿದೆ. ಬೇರೆ, ಬೇರೆ ಜಿಲ್ಲೆಗಳಿಂದ ಸಹ ಜನ ಜಿಲ್ಲೆಗೆ ಬರುತ್ತಿದ್ದು ಸೋಂಕು ವ್ಯಾಪಕವಾಗಿ ಹರಡುತ್ತಿರುವ ಭೀತಿ ಇದೆ.

ಕರೊನಾ ಲಸಿಕೆ ಪಡೆದ ಪರಮೇಶ್ವರ್: ತುಮಕೂರಿನ ಹೊರವಲಯದ ಅಗಳಕೋಟೆಯಲ್ಲಿರುವ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಶುಕ್ರವಾರ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೋವಿಡ್-19 ಲಸಿಕೆ ಪಡೆದರು. ನಂತರ ಮಾತನಾಡಿದ ಅವರು, ದೇಶದಲ್ಲಿ ಕರೊನಾ 2ನೇ ಅಲೆಯ ಆರ್ಭಟ ಜಾಸ್ತಿಯಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದ ಪಾರಾಗಲು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆಯಿತ್ತರು.

ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಲಸಿಕೆ ಪಡೆದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ಸೋಂಕಿನಿಂದ ಪಾರಾಗಬಹುದು. ಯಾರೂ ಸಹ ಹೆದರದೆ ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಡಾ.ಜಿ.ಪರಮೇಶ್ವರ್ ಮಾಜಿ ಡಿಸಿಎಂ