ಜಿಲ್ಲೆ

ಕಲ್ಪತರು ನಾಡಲ್ಲಿ ಎಸ್​ಎಂಕೆ ಒಡನಾಟ

ರಾಜಕೀಯ, ರಾಜಕಾರಣಿಗಳೊಂದಿಗೆ ಅವಿನಾಭಾವ ಸಂಬಂಧ, ಜಿಲ್ಲೆಯಿಂದಲೇ ಪಾಂಚಜನ್ಯ ಯಾತ್ರೆ

ತುಮಕೂರು: ನೆರೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯವರಾದ ಮಾಜಿ ಸಿಎಂ ಎಸ್​.ಎಂ.ಕೃಷ್ಣ ತುಮಕೂರು ಜಿಲ್ಲೆಯ ರಾಜಕೀಯ ಹಾಗೂ ರಾಜಕಾರಣಿಗೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸಿದ್ಧಗಂಗೆಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಎಸ್​ಎಂಕೆ, ಸ್ವಾಮೀಜಿ ಅವರ ಶತಮಾನೋತ್ಸವದಲ್ಲಿ ಸಿದ್ಧಗಂಗಾ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಕೂಡ ಹಾಕಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್​.ಎಂ.ಕೃಷ್ಣ ಅವರು ಚುನಾವಣಾ ಪ್ರಚಾರಕ್ಕಾಗಿ ಆರಂಭಿಸಿದ್ದ ಪಾಂಚಜನ್ಯ ಯಾತ್ರೆ ಕೂಡ ತುಮಕೂರಿನಿಂದಲೇ ಆರಂಭಿಸಿದ್ದರು. ರಾಜಕೀಯ ಸಭೆಗಳನ್ನು ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಆಯೋಜಿಸುವ ಮೂಲಕ ಯಶಸ್ಸು ಕಂಡು ಅದೃಷ್ಟದ ತಾಣವನ್ನಾಗಿಸಿಕೊಂಡಿದ್ದರು.

ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯಲ್ಲಿ ತುಮಕೂರು ವಿವಿ ಆರಂಭಿಸಿ ಈ ಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದನ್ನು ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಎಸ್​.ಎಂ.ಕೃಷ್ಣ ಅವರ ಕಾಲದಲ್ಲಿ ಆರಂಭಿಸಲಾದ ಕ್ರಾಂತಿಕಾರಕ "ಸ್ತ್ರೀ ಶಕ್ತಿ' ಕಾರ್ಯಕ್ರಮವನ್ನು ತುಮಕೂರು ತಾಲೂಕು ಹೆಬ್ಬೂರಿನಲ್ಲಿ ಆಯೋಜಿಸಿ ಅಂದಿನ ಕಾಲಕ್ಕೆ 5 ಲಕ್ಷಕ್ಕೂ ಹೆಚ್ಚು ಜನರನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಿದ್ದ ಹೆಗ್ಗಳಿಕೆಯನ್ನು ಇಂದಿಗೂ ಯಾರೂ ಬ್ರೇಕ್​ ಮಾಡಲು ಸಾಧ್ಯವಾಗಿಲ್ಲ ಎಂಬುದು ಮತ್ತೊಂದು ವಿಶೇಷ. ಎಐಸಿಸಿ ಅಧ್ಯೆಯಾಗಿದ್ದ ಸೋನಿಯಾ ಗಾಂಂಧಿ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಸ್ತ್ರೀಶಕ್ತಿ ಸಮಾವೇಶ ಕುಣಿಗಲ್​ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹೆಬ್ಬೂರಿನಲ್ಲಿ ಆಯೋಜಿಸಲಾಗಿತ್ತು. ರಾಜ್ಯದೆಲ್ಲೆಡೆಗಳಿಂದಲೂ ಸ್ತ್ರೀಯರನ್ನು ಸಂಟಿಸಿ "ಸ್ತ್ರೀಶಕ್ತಿ' ಸ್ವಸಹಾಯ ಸಂಗಳನ್ನು ಆರಂಭಿಸಲಾಗಿದ್ದು, ಇಂದು ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ. ಎಸ್​.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಡಾ.ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಅವರು ಪ್ರಭಾವಿ ಖಾತೆಗಳನ್ನು ಪಡೆದು ಸಚಿವರಾಗಿದ್ದರು. ಎಸ್​.ಪಿ.ಮುದ್ದಹನುಮೇಗೌಡ, ಆರ್​.ನಾರಾಯಣ, ಜಿ.ಎಸ್​.ಬಸವರಾಜು ಕೂಡ ಕೃಷ್ಣ ಅವರಿಗೆ ಆಪ್ತರಾಗಿದ್ದರು. ವಿಧಾನ ಪರಿಷತ್​ ಸದಸ್ಯರಾಗಿದ್ದ ಕೆ.ಎನ್​.ರಾಜಣ್ಣ ಹಾಗೂ ಎಸ್​ಎಂಕೆ ನಡುವೆ ಮಾತ್ರ ಮುಸುಕಿನ ಗುದ್ದಾಟ ಕೂಡ ಜಿಲ್ಲಾ ರಾಜಕಾರಣದಲ್ಲಿ ಮಹತ್ವ ಪಡೆದಿತ್ತು. ಹುಲಿಯೂರುದುರ್ಗ ಶಾಸಕರಾಗಿದ್ದ ವೈ.ಕೆ.ರಾಮಯ್ಯ ಅವರೂ ಕೂಡ ಅವರ ಕೊನೆಯ ದಿನಗಳಲ್ಲಿ ಎಸ್​.ಎಂ.ಕೃಷ್ಣ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್​ ಸೇರ್ಪಡೆಯಾಗಿ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಜಕೀಯದಲ್ಲಿ ಅಜಾತ ಶತ್ರು: ನಗರದ ಬಿಜಿಎಸ್​ ವೃತ್ತದಲ್ಲಿ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ತುಮಕೂರಿನ ನಾಗರಿಕರು ಗೌರವ ನಮನ ಸಲ್ಲಿಸಿದರು. ಮಾಜಿ ಶಾಸಕ ಎಚ್​.ನಿಂಗಪ್ಪ ಮಾತನಾಡಿ, ಕೃಷ್ಣ ಅವರು ರಾಜಕೀಯದಲ್ಲಿ ಅಜಾತ ಶತ್ರು ಆಗಿದ್ದವರು. ಬೆಂಗಳೂರಿಗೆ ವಿಶ್ವಭೂಪಟದಲ್ಲಿ ಮಹತ್ವದ ಸ್ಥಾನ ಸಿಗುವಂತೆ ಮಾಡಿದ ದೂರದೃಷ್ಟಿ ಹೊಂದಿದ್ದ ನಾಯಕ, ಕೆಂಪೇಗೌಡರಂತೆಯೇ ಬೆಂಗಳೂರನ್ನು ಕಟ್ಟಿ ಬೆಳೆಸಿದವರು ಎಂದು ಸ್ಮರಿಸಿದರು.

ಸಹನಶೀಲ, ಮೇರು ವ್ಯಕ್ತಿತ್ವದ ಮುತ್ಸದ್ದಿ ರಾಜಕಾರಣಿ, ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅಗಲಿಕೆ ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ವ್ಯಕ್ತಿತ್ವದ ಮೂಲಕ ರಾಜ್ಯದಲ್ಲಿ ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಅವರ ರಾಜಕೀಯ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ. ಸಿಎಂ ಆಗಿದ್ದಾಗಲೂ ಪ್ರಮುಖ ವಿಚಾರಗಳಲ್ಲಿ ಅತ್ಯಂತ ಸಹನೆ, ಸಮಚಿತ್ತತೆಯಿಂದ ಸಚಿವ ಸಂಪುಟದಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ತೀಮಾರ್ನ ತೆಗೆದುಕೊಳ್ಳುತ್ತಿದ್ದರು. ಪಕ್ಷ ಹಾಗೂ ಸರ್ಕಾರದಲ್ಲಿ ಅವರೊಂದಿಗೆ ಕೆಲಸ ಮಾಡಿದ ಸಾರ್ಥಕತೆ ನನಗಿದೆ. ಅವರ ನಿಧನದಿಂದ ದೇಶ ಮೇಧಾವಿ, ರಾಜನೀತಿಜ್ಞ, ಹಿರಿಯ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ನನಗೆ ನೋವಾಗಿದೆ. ಸಾರ್ವಜನಿಕ ಬದುಕಿಗೆ ನಷ್ಟವಾಗಿದೆ. ಅವರಿಗೆ ಯಾವ ರೀತಿಯ ಅಂತಿಮ ಗೌರವ ಸಲ್ಲಿಸಿದರೂ ಸಾಲುವುದಿಲ್ಲ.

| ಡಾ.ಜಿ.ಪರಮೇಶ್ವರ ಗೃಹ ಸಚಿವ