ಜಿಲ್ಲೆ

ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘ ಕೈ ವಶ

ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತದಾರರು ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಎ.ಗೋಪಾಲಸ್ವಾಮಿ ತಿಳಿಸಿದರು.

ಹೋಬಳಿಯ ಜಂಬೂರು ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಜಯಗಳಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಈ ಬಾರಿಯ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡು ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂಬ ಗುರಿಯೊಂದಿಗೆ ಚುನಾವಣೆ ಎದುರಿಸಿತ್ತು. ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿ, ಸಾಲಗಾರರ ಕ್ಷೇತ್ರದಿಂದ ಒಟ್ಟು 10 ಜನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಯಿತು. ಇದರಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಸಾಲಗಾರರ ಕ್ಷೇತ್ರದಿಂದ 5 ಜನ ಅಭ್ಯರ್ಥಿಗಳು ಒಟ್ಟು 6 ಜನ ಸದಸ್ಯರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಇದರಿಂದ ಈ ಬಾರಿ ಚುನಾವಣೆಯಲ್ಲಿ ರೈತರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಘ ಪಾರದರ್ಶಕವಾಗಿರಬೇಕು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರುಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ನೂತನ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಸಾಲಗಾರರಲ್ಲದ ಕ್ಷೇತ್ರದಿಂದ ಧನಂಜಯ(ಶಶಿ), ಸಾಲಗಾರರ ಕ್ಷೇತ್ರದಿಂದ ಮರಿಗೌಡ (ರಮೇಶ್), ಕಲ್ಕೆರೆ ಶಾರದಮ್ಮ ಮಂಜೇಗೌಡ, ಬಸವರಾಜ್ (ದಿನೇಶ್), ಹೋಟೆಲ್ ಮಂಜುನಾಥ್, ರಾಜಮ್ಮ ಕಾಳಯ್ಯ, ಅವರನ್ನು ಎಂಎ ಗೋಪಾಲಸ್ವಾಮಿ ಅಭಿನಂದಿಸಿದರು.

ಮುಖಂಡರಾದ ಲಾಯರ್ ಬಸವರಾಜ್, ಯುವ ಕಾಂಗ್ರೆಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕಲ್ಕೆರೆ ಮೋಹನ್, ರಾಮಕೃಷ್ಣೇಗೌಡ , ರಂಗಪ್ಪ, ಚಂದು, ದಿಲೀಪ್, ಡಿ.ಸಿ. ನವೀನ್, ಹರೀಶ್, ಪ್ರಸನ್ನ, ಯಶ್ವಂತ್, ಮಂಜುನಾಥ್, ಹಾಜರಿದ್ದರು.