ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ, ನೃತ್ಯ, ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳ. ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ನಗರದ ಲಯ ಪ್ರತಿಷ್ಠಾನ ವತಿಯಿಂದ ಇಲ್ಲಿನ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ನೃತ್ಯೋತ್ಸವ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಾ ಹೊಂಬಳ ಮಾತನಾಡಿ, ಎಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ನಾಟಕಗಳು ಅರಳುತ್ತವೋ ಅಲ್ಲಿ ಸಹೃದಯಿ ಜನ ಇರಲಿದ್ದಾರೆ. ಅವು ತಾವೇ ಅರಳುತ್ತವೆ ಎಂದು ಬಿಟ್ಟರೆ ಸಾಧ್ಯವಿಲ್ಲ. ಅವುಗಳಿಗೆ ಅರಳುವಂತೆ ನೀರೆರೆಯುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಅಂದಾಗ ಮಾತ್ರ ನಮ್ಮ ಕಲೆ, ಸಂಸ್ಕೃತಿ ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯ ಎಂದರು.
ಪಾಲಿಕೆ ಸದಸ್ಯೆ ಅನಿತಾ ಚಳಗೇರಿ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ, ಸಾಂಸ್ಕೃತಿಕ ಲೋಕ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಅಶ್ಫಕ ಸಯ್ಯದ, ಪ್ರಕಾಶ ಕ್ಷತ್ರಿ, ಯುವ ಮುಖಂಡ ಸಂತೋಷ ದೇವರೆಡ್ಡಿ, ದಿವ್ಯಾ ಕಾಮತ, ಲಯ ಪ್ರತಿಷ್ಠಾನದ ಪದಾಧಿಕಾರಿಗಳಾದ ಪ್ರಕಾಶ ಕಬ್ಬೂರ, ವಿಜಯಕುಮಾರ ಬಿರಾದಾರ, ರವಿಕುಮಾರ ಕಾಡದ, ಶಶಿಧರ ಪಾಸ್ತೆ, ಸಂತೋಷ ಹಾವೇರಿ, ಇತರರು ಇದ್ದರು.
ನಂತರ ಆತ್ಮಾನಂದ ಕಬ್ಬೂರ ನಿರ್ದೇಶನದಲ್ಲಿ ಸಮೂಹ ನೃತ್ಯ, ಜಾನಪದ ನೃತ್ಯ, ವಿದುಷಿ ಸವಿತಾ ಹೆಗಡೆ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ, ವಿಠ್ಠಲ ಮಾರ್ಗದರ್ಶನದಲ್ಲಿ ಕರಾಟೆ ಪ್ರದರ್ಶನ ನಡೆಸಲಾಯಿತು.