ಬಳ್ಳಾರಿ : ವಿದ್ಯಾರ್ಥಿಗಳು ಸಾಂಸ್ಕೃತಿಕ ಮನೋಭಾವನೆಯಿಂದಾಗಿ ಸಮಾಜದಲ್ಲಿ ಸ್ಥಿರವಾಗಿ ನಿಲ್ಲುತ್ತಾರೆ ಎಂದು ಕಸಾಪ ಮಾಜಿ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯ ಡಾ.ಬಿ.ಆರ್. ಸಭಾಂಗಣದಲ್ಲಿ ಎರಡು ದಿನಗಳ ಅಂತರ್‌ವಿಭಾಗೀಯ ಯುವಜನೋನತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಪಂಚದಲ್ಲಿ ವಿಶಿಷ್ಟವಾದ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು, ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರೇರೇಪಿಸುತ್ತವೆ. ವಿವಿ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಿಸಲು ಸೂಕ್ತವಾಗಿವೆಎಂದರು.
ವಿಎಸ್‌ಕೆ ವಿವಿ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಪೂರ್ವಜರು ತಮ್ಮ ದೈನಂದಿನ ಶ್ರಮದಿಂದ ಉಂಟಾಗುವ ದಣಿವನ್ನು ನಿವಾರಿಸಿಕೊಳ್ಳಲು ಕಲೆಗಳಲ್ಲಿ ತಲ್ಲೀನರಾಗುತ್ತಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ದೃಢ ಮನಸ್ಸು, ಸಾಧಿಸುವ ಛಲ ಸಂಕುಚಿತವಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸುವ ಮೂಲಕ, ಬಹುಮುಖ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ವಿವಿ ಕುಲಪತಿ ಪ್ರೊ. ಜೆ. ತಿಪ್ಪೇರುದ್ರಪ್ಪ, ಯುವಜನೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ಸಂಚಾಲಕರಾ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಮಾತನಾಡಿದರು. ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ 20 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು