ದಾವಣಗೆರೆ: ಬೆಳಗಿನ ಮೈನಡುಗುವ ಚಳಿ ಕಡಿಮೆಯಾಗಿ, ಬಾನಿನಿಂದ ಆಗಷ್ಟೆ ಸೂರ್ಯನ ಕಿರಣ ಭೂಮಿಯನ್ನು ಸ್ಪರ್ಶಿಸಿ, ತುಸು ಬಿಸಿಲು ಮೂಡಿತ್ತು. ನಗರದ ರಿಂಗ್ ರಸ್ತೆಯಲ್ಲಿ ಕಣ್ಣಾಯಿಸಿದ ಕಡೆಗೆಲ್ಲ ಕಲೆಯ ರಂಗು ಆವರಿಸಿತ್ತು. ವೈವಿಧ್ಯಮಯ ಉಡುಪು ಧರಿಸಿ ಬಂದಿದ್ದ ಕಲಾವಿದರು ನಮ್ಮ ಸಂಸ್ಕೃತಿಯ ಝಲಕ್ ಪ್ರದರ್ಶಿಸಿದರು.
ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಕಲಾತಂಡಗಳ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯವಿದು.
ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮಂಗಳ ಕಳೆ ನೀಡಿದರು. ಲಂಬಾಣಿ ಯುವತಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿ, ಸಂಭ್ರಮಿಸಿದರು.
ಬೃಹತ್ ಗೊಂಬೆಗಳ ವೇಷಧಾರಿಗಳು, ಪಟ, ಮರಗಾಲು ಕುಣಿತ, ಡೊಳ್ಳು ಬಾರಿಸುವ ಮಹಿಳಾ ತಂಡಗಳು ಗಮನ ಸೆಳೆದವು. ಅಲ್ಲದೆ, ಯುವಗೀತೆಯ ಸ್ವರ ಮನಸುಗಳನ್ನು ತಣಿಸಿದವು. ಚಂಡೆ ವಾದ್ಯದ ಸದ್ದು ಮೊಳಗಿತು.
ಹೊರ ರಾಜ್ಯದ ತಂಡಗಳೂ ಕಲೆಯನ್ನು ಪ್ರದರ್ಶಿಸಿದವು. ಯುವಜನೋತ್ಸವದ ಲೋಗೋಗಳು ಮೆರವಣಿಗೆಯಲ್ಲಿ ಇದ್ದವು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು. ಸಂವಿಧಾನದ ಪೀಠಿಕೆ ಇರುವ ಫಲಕ ಮುಂಭಾಗದಲ್ಲಿತ್ತು. ಎತ್ತಿನ ಗಾಡಿಯಲ್ಲಿ ಯಕ್ಷಗಾನ ಇನ್ನಿತರ ಕಲೆಗಳ ವೇಷಧಾರಿಗಳು ದಾರಿಹೋಕರನ್ನು ರಂಜಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಹರಿಹರ ಶಾಸಕ ಬಿ.ಪಿ.ಹರೀಶ್, ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಸಿಇಒ ಡಾ.ಸುರೇಶ್ ಬಿ.ಇಟ್ನಾಳ್ ಇದ್ದರು.