ಜಿಲ್ಲೆ

ಕಲೆ ಸಂಸ್ಕೃತಿ ಪರಂಪರೆ ಉಳಿಸಿ; ನಾಟಕೋತ್ಸವದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಒತ್ತಾಯ

ದೊಡ್ಡಬಳ್ಳಾಪುರ: ಕಲೆ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ‌್ಯಕ್ರಮಗಳು ಇಂಬು ನೀಡಲಿದ್ದು, ಸಾಂಸ್ಕೃತಿಕ ಕಾರ‌್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಒತ್ತಾಯಿಸಿದ್ದಾರೆ.

ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಮೈದಾನದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಜಾಗೃತ ಪರಿಷತ್ತು, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ ಹಾಗೂ ಅನಿಕೇತನ ಟ್ರಸ್ಟ್ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ದೊಡ್ಡಬಳ್ಳಾಪುರದಲ್ಲಿ ಮೇರು ಕಲಾವಿದರಿದ್ದಾರೆ. ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸಾಂಸ್ಕೃತಿಕ ಸೊಗಡಿನ ಕಲೆಯ ಅನಾವರಣಗೊಳಿಸುವ ವೇದಿಕೆಗಳ ಅಗತ್ಯವಿದೆ. ಗ್ರಾಮೀಣ ಬಾಗಗಳಲ್ಲಿ ಇಂದಿಗೂ ಕಲೆ ಉಳಿಯುತ್ತಿರುವುದಕ್ಕೆ ಇಂತಹ ನಾಟಕೋತ್ಸವಗಳು ನಿದರ್ಶನವಾಗಿದ್ದು, ಇಂತಹ ಕಲಾವಿದರಿಗೆ ಜಾತ್ರಾ ನಾಟಕೋತ್ಸವ ಉತ್ತಮ ವೇದಿಕೆ ನೀಡಿದೆ ಎಂದರು.

ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ಸಿನಿಮಾ, ವಿದ್ಯುನ್ಮಾನ ಮಾಧ್ಯಮಗಳ ಮನರಂಜನೆಗಳ ಪೈಪೋಟಿಗಳ ನಡುವೆಯೂ ರಂಗಕಲೆ ಜೀವಂತವಾಗಿದ್ದು, ಕಲಾವಿದರು ಕಲೆಯನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡಬೇಕಾದ ಹೊಣೆ ಸಮುದಾಯದ ಮೇಲಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಸರ್ಕಾರ ಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ‌್ಯಕ್ರಮ ಹಾಗೂ ಕಲಾವಿದರಿಗೆ ಹೆಚ್ಚಿನ ಧನ ಸಹಾಯ ನೀಡುವುದರೊಂದಿಗೆ ಕಲಾಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದ್ದು, ಸರ್ಕಾರ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಆಯೋಜಿಸುವ ಯೋಜನೆ ರೂಪಿಸಬೇಕಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್, ತಾಲೂಕು ಕನ್ನಡ ಪಕ್ಷ ಅಧ್ಯಕ್ಷ ಎಂ.ಸಂಜೀವ್ ನಾಯಕ್, ಪ್ರಧಾನ ಕಾರ‌್ಯದರ್ಶಿ ಡಿ.ಪಿ.ಆಂಜನೇಯ, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಮಲ್ಲಾತಹಳ್ಳಿ,ಉಪಾಧ್ಯಕ್ಷ ಮುನಿರಾಜು, ನಿರ್ದೇಶಕರಾದ ಸಿ.ಎಚ್.ಕೃಷ್ಣಮೂರ್ತಿ, ಎಂ.ವೆಂಕಟರಾಜು, ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥಾಪಕರಾದ ಲೀಲಾವತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಧಿಕಾರಿ ಬಿ.ಜಿ.ಅಮರನಾಥ್, ಶಿಕ್ಷಕ ಎಚ್.ಎನ್.ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಡಿ.ಶ್ರೀಕಾಂತ, ನಂದ ಕುಮಾರ್, ಪ್ರಕಾಶ್ ರಾವ್, ವೆಂಕಟೇಶ್ ಮತ್ತಿತರರಿದ್ದರು.

ಬಾಶೆಟ್ಟಿಹಳ್ಳಿಯ ಯು.ಎಂ.ಮಂಜುನಾಥ್ ಕಲಾ ತಂಡದಿಂದ ನೃತ್ಯ ಕಾರ‌್ಯಕ್ರಮ, ಮುತ್ಯಾಲಮ್ಮದೇವಿ ಕಲಾತಂಡದಿಂದ ಭರತನಾಟ್ಯ ಹಾಗೂ ರಾತ್ರಿ ತೇರಿನ ಬೀದಿಯ ಶ್ರೀ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಎಲ್.ಎಸ್.ಬಸವರಾಜಯ್ಯ ನಿರ್ದೇಶನದಲ್ಲಿ ಶ್ರೀಕೃಷ್ಣ ಗಾರುಡಿ ಪೌರಾಣಿಕ ನಾಟಕ ಪ್ರದರ್ಶನಗೊಂಡವು.