ಹಾಸನ: ದೇಶಿಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರಿಂದ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ರಾಷ್ಟ್ರ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹೆಚ್ಚಿದೆ. ಸ್ವಾತಂತ್ರೃ ಸಂಗ್ರಾಮದಲ್ಲೂ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ಭಾರತದಲ್ಲಿ ಪ್ರತಿವರ್ಷ 55 ಸಾವಿರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆಯಾದರೂ, ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆ ಏನು ಎಂಬುದಕ್ಕೆ ಉತ್ತರವೇ ಇಲ್ಲವಾಗಿದೆ ಎಂದರು. ದೇಶದಲ್ಲಿ 955 ವಿಶ್ವವಿದ್ಯಾಲಯಗಳಿದ್ದು, ಪ್ರತಿವರ್ಷ 55 ಸಾವಿರ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ವರ್ಷಕ್ಕೆ 3 ಕೋಟಿ ಮಕ್ಕಳು ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆಯುತ್ತಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 80ರಷ್ಟು ಯುವಕರೇ ಇದ್ದಾರೆಯಾದರೂ ರಾಷ್ಟ್ರದ ಪ್ರಗತಿಗೆ ಅವರ ಕೊಡುಗೆ ಏನು ಎಂದು ಚರ್ಚಿಸಿದರೆ ಉತ್ತರ ಮಾತ್ರ ನಿರಾಶದಾಯಕವಾಗಿದೆ. 8 ಲಕ್ಷ ಜನರು ಸರ್ಕಾರಿ ಅಥವಾ ಸ್ವಯಂ ಉದ್ಯೋಗ ಕಂಡುಕೊಂಡರೆ ಉಳಿದವರು ಏನಾಗುತ್ತಾರೆ ಎಂಬುದು ಅರ್ಥವೇ ಆಗುತ್ತಿಲ್ಲ. ಎಲ್ಲರೂ ಮೊಬೈಲ್ ದಾಸರಾಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಗರಗಳಲ್ಲಿ ಬೀದಿಗೊಂದು ಆಸ್ಪತ್ರೆ ಇರುವಂತೆ ಮುಂದಿನ ದಿನಗಳಲ್ಲಿ ಮೊಬೈಲ್ ವ್ಯಸನದಿಂದ ದೂರ ಮಾಡುವ ಕೇಂದ್ರಗಳನ್ನು ತೆರೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.
ಕೇವಲ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟ್ರಾಂಗಳಲ್ಲಿ ದಿನದ 24 ಗಂಟೆ ಕಳೆಯುವುದೇ ಜೀವನ ಎಂದು ಭಾವಿಸಲಾಗಿದೆ. ಯಾರನ್ನೋ ಮೆಚ್ಚಿಸಲು ಜೀವನವನ್ನು ದುಸ್ಥಿತಿಗೆ ತಂದುಕೊಳ್ಳುತ್ತಿರುವ ಯುವಕರು ಇನ್ನಾದರು ಎಚ್ಚೆತ್ತುಕೊಳ್ಳಬೇಕು. ಭಾರತೀಯ ಜೀವನ ಪದ್ಧತಿ, ಗ್ರಾಮೀಣ ಭಾಗದ ಜನಜೀವನ ಏನೆಂಬುದನ್ನು ಅರಿಯಬೇಕು. ಸಮಾಜದಲ್ಲಿ ನಡೆಯುವ ಬಹುತೇಕ ತಪ್ಪುಗಳಲ್ಲಿ ವಿದ್ಯಾವಂತರೇ ಇರುತ್ತಾರೆ. ಮಾನವೀಯತೆ, ಸಂಸ್ಕಾರವಿಲ್ಲದಿದ್ದರೆ ಪದವಿ ಪಡೆದು ಏನು ಪ್ರಯೋಜನ. 2007ರಿಂದ ಇಲ್ಲಿವರೆಗೆ ನಡೆಸಿದ ಸಂಶೋಧನೆ ಪ್ರಕಾರ ಅಪರಾಧ ಪ್ರಕರಣಗಳಲ್ಲಿ ಶೇ. 16 ರಷ್ಟು ಪಾಲು ಯುವಕರದ್ದೇ ಇದೆ. ಹೀಗಾದರೆ ಸದೃಢ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಪಾಲಕರು ಮಕ್ಕಳಿಗೆ ತಿಳವಳಿಕೆ ನೀಡಬೇಕು. ಆದರೆ, ಸಣ್ಣಪುಟ್ಟ ವಿಚಾರಗಳನ್ನು ಪಾಲಕರೇ ಹೇಳಬೇಕು, ಶಿಕ್ಷಕರೇ ಕಲಿಸಬೇಕು ಎಂದರೆ ಸಾಧ್ಯವಿಲ್ಲ. ಮಕ್ಕಳು ಸ್ವಲ್ಪ ಸಮಾಜಮುಖಿಗಳಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಯುವ ಜನೋತ್ಸವದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಭರತ ನಾಟ್ಯ ಕಲಾವಿದ ಉನ್ನತ್ ಜೈನ್ ಅವರಿಗೆ ಸನ್ಮಾನಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಅಧಿಕಾರಿ ಮೀನಾಕ್ಷಿ, ಯುವ ಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಕೆ.ಹರೀಶ್, ಸಮಾಜ ಸೇವಕ ಜಿ.ಓ.ಮಹಾಂತಪ್ಪ, ಹಾಕಿ ಕ್ರೀಡಾ ತರಬೇತುದಾರ ರವೀಶ್, ಬಿ.ಟಿ.ಮಾನವ ಮತ್ತಿತರರು ಇದ್ದರು.