ಧಾರವಾಡ: ಭಾರತದ ಕಲೆ, ಸಾಹಿತ್ಯ, ಸಂಗೀತ ಪರಂಪರೆಯು ಶ್ರೀಮಂತವಾಗಿದೆ. ಜಾನಪದ ಕಲೆ, ಸಂಸ್ಕೃತಿಗಳನ್ನು ಮರೆತರೆ ನಮ್ಮತನವನ್ನು ಮರೆತಂತಾಗುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಲು ಯುವಕರು ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕು ಎಂದು ಬೃಹತ್, ಮದ್ಯಮ ಕೈಗಾರಿಕಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಸಂಜೆ ನಡೆದ 2019- 2020ನೇ ಸಾಲಿನ ರಾಜ್ಯ ಮಟ್ಟದ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಾಡಿನ ಪರಂಪರೆಯಾಗಿರುವ ಕಲೆ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಸರ್ಕಾರವು ವಿವಿಧ ಅಕಾಡೆಮಿಗಳ ಮೂಲಕ ನಿರಂತರವಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಭಜನೆ, ದೊಡ್ಡಾಟ, ಸಣ್ಣಾಟ, ಬಯಲಾಟ ಮತ್ತು ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಪ್ರದರ್ಶಿಸುವ ಸಾಮಾಜಿಕ ನಾಟಕಗಳು ಜೀವನ ಮೌಲ್ಯಗಳನ್ನು ಸಮಾಜಕ್ಕೆ ಮನವರಿಕೆ ಮಾಡುತ್ತವೆ. ಆದರೆ ಟಿವಿ, ಮೊಬೈಲ್ಗಳ ಹಾವಳಿಯಿಂದಾಗಿ ಜನರು ಸಾಮಾಜಿಕ ನಾಟಕ ಹಾಗೂ ಜಾನಪದ ಕಲೆಗಳಿಂದ ವಿಮುಖರಾಗುತ್ತಿದ್ದಾರೆ. ಎಲ್ಲವನ್ನೂ ಫೇಸ್ಬುಕ್, ವಾಟ್ಸ್ ಆಪ್ಗಳ ಮೂಲಕ ನೋಡಿ ಆನಂದಿಸುತ್ತಿದ್ದಾರೆ. ಇದರಿಂದಾಗಿ ಜಾನಪದ ಕಲೆಗಳು ಪ್ರೋತ್ಸಾಹಗಳಿಲ್ಲದೆ ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ. ರುದ್ರಪ್ಪ ಕರಿಶಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪ ಬಿರಾದಾರ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಪ್ರಶಸ್ತಿ ಪತ್ರ ವಾಚಿಸಿದರು. ಹಳಿಯಾಳದ ಜಾನಪದ ಕಲಾವಿದ ನಾರಾಯಣ ಹಾಗೂ ತಂಡ ಗೊಂಬೆಯಾಟ ಗೀತೆ ಪ್ರಸ್ತುತಪಡಿಸಿದರು. ಎಂ.ಎಸ್. ಗಾಣಿಗೇರ ವಂದಿಸಿದರು.
ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ, ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ, ವಿವಿಧ ಜಾನಪದ ಸಂಘಟನೆಗಳ ಮುಖ್ಯಸ್ಥರು, ಜಾನಪದ ಕಲಾವಿದರು ಉಪಸ್ಥಿತರಿದ್ದರು.
ಗೌರವಧನ, ಪ್ರಶಸ್ತಿ: ಜಾನಪದ ತಜ್ಞ ಡಾ. ಶ್ರೀಶೈಲ ಹುದ್ದಾರ ಅವರಿಗೆ 50,000 ರೂ. ಗೌರವಧನ ಸಹಿತ 2019- 20ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಹುಬ್ಬಳ್ಳಿಯ ಎಂ.ಎಸ್. ಮಾಳವಾಡ ಅವರಿಗೆ 25,000 ರೂ. ಗೌರವಧನ ಸಹಿತ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.
*