ಜಿಲ್ಲೆ

ಕಲುಷಿತ ವಾತಾವರಣ ಶುದ್ಧೀಕರಿಸಿ

ಪ್ರಾಧ್ಯಾಪಕ ಚಿತ್ತಯ್ಯ ಪೂಜಾರ್​ ಕಿವಿಮಾತು, ಮೌಲ್ಯಗಳು ಮರೆಯಾಗದಿರಲಿ ಪುಸ್ತಕ ಬಿಡುಗಡೆ

ಪಾವಗಡ: ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರೂ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು. ಅಂತೆಯೇ, ನಾವು ಜಾಗೃತವಾಗುವ ಜತೆಗೆ ಸಮಾಜವನ್ನು ಜಾಗೃತರನ್ನಾಗಿ ಮಾಡಬೇಕೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಚಿತ್ತಯ್ಯ ಪೂಜಾರ್​ ತಿಳಿಸಿದರು.

ತಾಲೂಕಿನ ಕಿಲಾರ್ಲಹಳ್ಳಿಯಲ್ಲಿ ಭಾನುವಾರ ಪತ್ರಕರ್ತ ನವೀನ್​ ಕಿಲಾರ್ಲಹಳ್ಳಿ ರಚಿಸಿದ "ಮೌಲ್ಯಗಳು ಮರೆಯಾಗದಿರಲಿ ಇದು ಹೆತ್ತವರ ಒಡಲಿನ ಕೂಗು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದ ಸೂತ್ರಗಳನ್ನು ಗಮನಿಸಿದವರು ಮಾತ್ರ ಸಮಾಜ ತಿದ್ದಿ ತೀಡಲು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಹದಿನೈದು ಸಾವಿರ ಸಂಬಳಕ್ಕೆ ಬೆಂಗಳೂರಿಗೆ ತೆರಳಿ ಕೆಲಸ ಮಾಡುವ ಯುವಜನತೆ ಅನೇಕ ದುಶ್ಚಟಗಳಿಗೆ ಬಲಿಯಾ ಗುತ್ತಿರುವುದು ದು@ಖಕರ ಸಂಗತಿ ಎಂದು ಹೇಳಿದರು.

ಕಲಾವಿದ ನವೀನ್​ ಕಿಲಾರ್ಲಹಳ್ಳಿ ಅವರು ಗುರು, ಹಿರಿಯರು, ಹೆತ್ತವರನ್ನು ನೋಡಿಕೊಳ್ಳಿ ಎಂದು ವಿನೂತನವಾಗಿ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಮಾಡಿ ಮಾದರಿ ಯಾಗುತ್ತಿರುವುದು ಹೆಮ್ಮೆ ಎಂದರು.

ಮಾನವನ ಆಲೋಚನೆ ಬದಲಾಗ ಬೇಕಾಗಿದ್ದು, ಕಲುಷಿತಗೊಂಡಿರುವಂತಹ ವಾತಾವರಣ ಶುದ್ಧೀಕರಿಸುವ ಅಗತ್ಯವಿದೆ ಎಂದು ತಿಳಿಸಿದರು. ಪುಸ್ತಕದ ಲೇಖಕ ನವೀನ್​ ಕಿರ್ಲಲಾಹಳ್ಳಿ ಮಾತನಾಡಿ, ಇಂದಿನ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಆತಂಕದಿಂದ ಮೌಲ್ಯಗಳು ಮರೆಯಾಗದಿರಲಿ ಎನ್ನುವ ಪುಸ್ತಕ ರಚಿಸಿದ್ದು, ಈ ಪುಸ್ತಕವನ್ನು ನನ್ನ ತಂದೆ&ತಾಯಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಮಧುಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಗೋವಿಂದರಾಯ ಮಾತನಾಡಿ, ಹೆತ್ತವರನ್ನು ಇಂದಿನ ಸಮಾಜ ಮರೆಯುತ್ತಿರುವುದು ದುರಂತ. ಸದ್ಯದ ಪರಿಸ್ಥಿತಿಯಲ್ಲಿ ಅನೈತಿಕತೆ ತಾಂಡವವಾಡುತ್ತಿದೆ. ನವೀನ್​ ಕಿಲಾರ್ಲಹಳ್ಳಿ ಅವರು ಸಮಾಜಕ್ಕೆ ಅಗತ್ಯವಾದಂಥ ಮೌಲ್ಯಗಳ ಕುರಿತು ಸಾರಿ ಹೇಳಿದಂಥ ಪುಸ್ತಕ ರಚಿಸಿದ್ದು, ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಹತ್ತಾರು ಜನಕ್ಕೆ ತಿಳಿಸಬೇಕು ಎಂದರು.

ರೈತ, ಕವಿ ಶಂಕರಪ್ಪ ಬಳ್ಳೆಕಟ್ಟೆ, ಹಿರಿಯ ಸಾಹಿತಿ ಸಣ್ಣನಾಗಪ್ಪ, ಲಂಡನ್​ ಡಾ.ಪ್ರಭಾಕರ್​ ರೆಡ್ಡಿ, ಸಿಪಿಐ ಸುರೇಶ್​ ಮಾತನಾಡಿದರು. ಇದಕ್ಕೂ ಮೊದಲು ಗ್ರಾಮದಲ್ಲಿ ಮೌಲ್ಯಗಳು ಮರೆಯಾಗದಿರಲಿ ಪುಸ್ತಕವನ್ನು ಅನೇಕ ಕನ್ನಡ ಕಲಾಭಿಮಾನಿಗಳೊಂದಿಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಲೇಖಕ ನವೀನ್​ ಕಿಲಾರ್ಲಹಳ್ಳಿ ಅವರನ್ನು ವಿವಿಧ ಸಂಘ ಸಂಸ್ಥೆ ಹಾಗೂ ಕವಿಗಳಿಂದ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಪತ್ರಕರ್ತ ಶ್ರೀನಿವಾಸ್​ ಪೊನ್ನಸಮುದ್ರ, ಮಧುಗಿರಿ ಬಿಇಒ ಹನುಮಂತರಾಯಪ್ಪ, ಕಾರ್ಮಿಕ ನಿರೀಕ್ಷಕ ಎಸ್​.ಹರೀಶ್​ ಕುಮಾರ್​, ಲೇಖಕರ ತಂದೆ ಬಸಪ್ಪ, ತಾಯಿ ಜಯಮ್ಮ ಇತರರಿದ್ದರು.