ಜಿಲ್ಲೆ

ಕಲುಷಿತ ನೀರು ಸೇವಿಸಿ 14 ಜನ ಅಸ್ವಸ್ಥ

ಬೀದರ್: ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯರು ಸೇರಿ 11 ಜನ ಅಸ್ವಸ್ಥರಾಗಿದ್ದಾರೆ.
ಚಿಕಿತ್ಸೆ ನಂತರ ನಾಲ್ವರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಮೂವರು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಮತ್ತು ಏಳು ಜನ ವಾಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರಿದ್ದಾರೆ.
ಮೂರು ದಿನಗಳಿಂದ ಗ್ರಾಮದಲ್ಲಿ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಶನಿವಾರ ಈ ಸಂಖ್ಯೆ ಅಧಿಕಗೊಂಡಿದ್ದರಿಂದ ತಕ್ಷಣ ಎಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮದ ಒಂದು ಓಣಿಯಲ್ಲಿ ಮಾತ್ರ ವಾಂತಿ-ಭೇದಿ ಕಾಣಿಸಿಕೊಂಡಿದೆ.
ಊರಲ್ಲಿ ಇತ್ತೀಚೆಗೆ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಪೂರ್ಣಗೊಂಡಿದ್ದು, ಈ ಮೂಲಕವೇ ಮನೆ-ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜು ಸಂಪರ್ಕದ ಗೇಟ್ವಾಲ್ವ್ ತಿಪ್ಪೆಯಲ್ಲಿ ಅಳವಡಿಸಲಾಗಿದೆ. ಇಲ್ಲಿ ಸೋರಿಕೆ ಕಾಣಿಸಿಕೊಂಡಿದೆ. ಮಳೆ ನೀರು ಪೈಪ್ ಮೂಲಕ ಮನೆಗಳಿಗೆ ಸರಬರಾಜು ಆಗಿದೆ. ಈ ಗೇಟ್ವಾಲ್ವ್ ಮೂಲಕ ಸಂಪರ್ಕವಾಗುವ ಮನೆಗಳಲ್ಲಿ ಮಾತ್ರ ಕೆಲವರು ಅಸ್ವಸ್ಥರಾಗಿದ್ದಾರೆ. ಜೆಜೆಎಂ ಕಳಪೆ ಕಾಮಗಾರಿ ಕಾರಣ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಒಂದು ಆಂಬುಲೆನ್ಸ್ ಇಡಲಾಗಿದೆ.