ಬಳ್ಳಾರಿ : ಮಳೆಗಾಲದ ಹಿನ್ನಲೆಯಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ಹಾಗೂ ನಿಯಮಿತವಾಗಿ ಎಲ್ಲ ನೀರಿನ ಮೂಲಗಳನ್ನು ಪರೀಕ್ಷೆಗೊಳಪಡಿಸಿದ ಬಳಿಕವೇ ಕುಡಿಯಲು ಪೂರೈಕೆ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಹೇಳಿದರು.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದರು. ಸಂಭಾವ್ಯ ವಾಂತಿಭೇದಿ ಪ್ರಕರಣಗಳು ಕಂಡು ಬರಬಹುದಾಗಿದ್ದು, ಜಾಗ್ರತೆ ವಹಿಸಬೇಕು. ಮಳೆಗಾಲ ಹಿನ್ನಲೆಯಲ್ಲಿ ನೀರು ಅಲ್ಲಲ್ಲಿ ನಿಲ್ಲುವ ಸಾಧ್ಯತೆಯಿದ್ದು, ಚರಂಡಿ ಹತ್ತಿರದ ಪೈಪ್‌ಲೈನ್‌ಗಳು ಸೋರಿಕೆ ಕಂಡು ಬಂದಲ್ಲಿ ತಕ್ಷಣ ಆಯಾ ಸ್ಥಳೀಯ-ಸಂಸ್ಥೆ, ಪಂಚಾಯಿತಿಗಳಿಗೆ ತಿಳಿಸುವ ಕಾರ್ಯ ಮಾಡಬೇಕು. ನೀರಿನ ಮೂಲಗಳನ್ನು ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಿಯಮಾನುಸಾರ ಕ್ಲೋರಿನೇಷನ್ ಮಾಡಿಸಬೇಕು ಎಂದು ನಿರ್ದೇಶಿಸಿದರು.
ಡಿಎಚ್‌ಒ ಡಾ.ವೈ. ರಮೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರಮುಖ ಜಾತ್ರೆ, ಉತ್ಸವಗಳಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡವು ಸಕಾಲದಲ್ಲಿ ಉಪಸ್ಥಿತರಿದ್ದು, ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ, ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಬೇಧಿ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಲಾಗಿದೆ. ನೀರು ತುಂಬುವ ಪರಿಕರಗಳಿಗೆ ಟೆಮೋಪಾಸ್ ರಾಸಾಯನಿಕ ಹಾಕಬಹುದಾಗಿದ್ದು, ಈ ಕುರಿತು ಕುಟುಂಬದ ಸದಸ್ಯರಿಗೆ ತಿಳಿಸಿಕೊಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ವಾಹನ ಮೂಲಕ ಮೈಕಿಂಗ್, ಡಂಗುರ ಹಾಕಿಸಲು ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿ ರೋಗಿಗಳನ್ನು ಗುರುತಿಸಲು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೆಮ್ಮು ಹಾಗೂ ಕ್ಷಯರೋಗದ ಲಕ್ಷಣಗಳು ಇದ್ದಲ್ಲಿ ಅಂತವರನ್ನು ಅಸಾಂಕ್ರಾಮಿಕ ರೋಗ ಪರೀಕ್ಷೆ ವಿಭಾಗದಲ್ಲಿ ಅಗತ್ಯ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಖಚಿತ ಪಟ್ಟಲ್ಲಿ ತಕ್ಷಣ ಚಿಕಿತ್ಸೆ ನೀಡಿ, ಕ್ಷಯಮುಕ್ತ ಬಳ್ಳಾರಿ ಅಭಿಯಾನವನ್ನು ಯಶಸ್ವಿಗೊಳಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಅಂಧತ್ವ ನಿಯಂತ್ರಣ ಹಾಗೂ ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ವ್ಯಾಪಕವಾಗಿ ಚರ್ಚಿಸಿದರು. ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ, ಡಾ.ಫಾರೂಖ್ ಇದ್ದರು.