ಜಿಲ್ಲೆ

ಕಲಿತು ಜಾತಿವಾದ ಮಾಡುವ ಶಿಕ್ಷಣದಿಂದ ಏನು ಪ್ರಯೋಜನ?: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಲಿತು ಜಾತಿವಾದಿಗಳಾಗಿ, ಧಾರ್ಮಿಕ ತಾರತಮ್ಯ ಪಾಲಿಸೋದು ಮಾಡಿದರೆ ಅಂತಹ ಶಿಕ್ಷಣದಿಂದ ಏನು ಪ್ರಯೋಜನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ತುಮಕೂರಿನ ಸಿದ್ಧಾರ್ಥ ಎಜುಕೇಷನ್‌ಸೊಸೈಟಿಯ ವತಿಯಿಂದ ಸುಭಾಷ್‌ನಗರದಲ್ಲಿ ನಿರ್ಮಾಣಗೊಂಡಿರುವ ‘ಕ್ವೆಸ್ಟ್ ಅಕಾಡೆಮಿ’ಯನ್ನು

ಉದ್ಘಾಟಿಸಿ ಮಾತನಾಡಿದರು.

ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಬಹಳ ಜನ ಶಿಕ್ಷಣ ಪಡೆದಿರುತ್ತಾರೆ. ಆದರೆ, ಅವರಲ್ಲಿ ಸಾಮಾಜಿಕ, ಮಾನವೀಯ ಸ್ಪಂದನೆಯೇ ಇರಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಡಾಕ್ಟರ್, ಇಂಜಿನಿಯರಿಂಗ್ ಓದಿರುತ್ತಾರೆ. ಆದರೆ, ಮೌಢ್ಯ, ಕಂದಾಚಾರ ಬಿಡೋದೇ ಇಲ್ಲ. ಇಂತಹ ಶಿಕ್ಷಣ ಬೇಕಾ?. ಬಸವಣ್ಣನವರು ಜಾತಿ ವ್ಯವಸ್ಥೆ ವಿರುದ್ಧ ಸಂದೇಶ ಕೊಟ್ಟು 850 ವರ್ಷ ಆಯ್ತು. ಆದರೆ, ಈಗಲೂ ಜಾತಿ ಮಾಡ್ತಾನೇ ಇದ್ದಾರೆ. ಇದು ತಪ್ಪು ಅಲ್ವೇ ಎಂದರು.

ಬಸವಣ್ಣನವರು ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಹಣೆಬರಹ ಅನ್ನೋದನ್ನೆಲ್ಲ ಧಿಕ್ಕರಿಸಿದ್ದರು. ಈಗಲೂ ಅವರ ಹೆಸರಲ್ಲಿ ಕರ್ಮಸಿದ್ಧಾಂತ ಪಾಲಿಸುವ ಶಿಕ್ಷಿತರಿದ್ದಾರೆ. ಇಂತಹ ಶಿಕ್ಷಣ ಬೇಡವೇ ಬೇಡ. ಹಣೆಬರಹ ನಿಜವಾಗಿದ್ದರೆ ನನ್ನ ಸಹೋದರರು ಏಕೆ ಹೊಲ ಉಳುತ್ತಿದ್ದರು. ನಾನು ಒಬ್ಬನೇ ಏಕೆ ಸಿಎಂ ಆಗಲು ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಶೂದ್ರರ ರೀತಿ, ಮಹಿಳೆಯರನ್ನೂ ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮೂಲೆಯಲ್ಲಿ ಇರಿಸಲಾಗಿತ್ತು. ಆದರೆ, ಈಗ ನಿರಂತರ ಹೋರಾಟದ ಫಲವಾಗಿ ಶಿಕ್ಷಣದ ಹಕ್ಕು ಬಂದಿದೆ. ಈ ಶಿಕ್ಷಣ ವೈಜ್ಞಾನಿಕವಾಗಿರಬೇಕು ಎಂದರು.

ಕೆಲವರು ಮಾತ್ರ ದೇಶ ಸಂಪತ್ತು ಅನುಭವಿಸಬೇಕಾ? ಸಮಾಜದ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ತಾನೇ? ಸಾಮಾಜಿಕ ತಾರತಮ್ಯ ಹೋಗಬೇಕು ತಾನೇ? ಸಮಾಜದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿ ಅವರು ಸಹ ಸಮಾಜದ ಮುಖ್ಯವಾಹಿನಿ ಬರಬೇಕು. ಇದನ್ನೇ ಅಂಬೇಡ್ಕರ್ ಸಹ ಹೇಳಿದ್ದರು. ಆದರೆ, ಇದು ಇನ್ನೂ ಸಾಧ್ಯವಾಗಿಲ್ಲ ಎಂದರು.

ಸ್ವಾತಂತ್ರೃ ಯಶಸ್ಸಿಯಾಗಬೇಕಾದರೆ ಅಸಮಾನತೆಯಿಂದ ನರಳುತ್ತಿರುವ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾತಂತ್ರೃ ಸಿಗಬೇಕು. ಮನುಷ್ಯ ಮನುಷ್ಯರನ್ನು ಪ್ರೀತಿಸುವ ಶಿಕ್ಷಣ ಬೇಕು, ದ್ವೇಷ ಬಿತ್ತುವ ಶಿಕ್ಷಣ ಬೇಡ ಎಂದರು.