ಹಾಸನ : ಶಿಕ್ಷಣ ಎಂದರೆ ಅರಿವು ಈ ನಿಟಿನಲ್ಲಿ ಕಲಿತವರೆಲ್ಲರು ಅನಕ್ಷರಸ್ಥರಿಗೆ ಕಲಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಸಾಕ್ಷರತೆಯನ್ನು ಸಾಧಿಸಲು ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ವಾರ್ತಾ ಭವನದ ಆವರಣದಲ್ಲಿ ಶುಕ್ರವಾರ ಧ್ವಜಾರೋಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಕಲಿಯುವುದರ ಜೊತೆಗೆ ಪ್ರೀತಿ, ವಿಶ್ವಾಸ, ಸಂಸ್ಕಾರ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಆರ್.ಪೂರ್ಣಿಮಾ ಅವರು ಮಾತನಾಡಿ, ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಉದ್ದೇಶದಿಂದ 1990-97ರವರೆಗೆ ಸಾಕ್ಷರತಾ ಆಂದೋಲನದ ಮೂಲಕ ಅಕ್ಷರ ಕ್ರಾಂತಿ ನಡೆಯಿತು ಇದು ನಿಜವಾಗಲು ಸಫಲತೆಯನ್ನು ಕಂಡಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ 13,297 ಮಂದಿ ಅಕ್ಷರ ಕಲಿತ್ತಿದ್ದಾ.ೆ ಭಾರತದಲ್ಲಿ ಅಕ್ಷರಸ್ಥರ ಪ್ರಮಾಣ ಶೇ.78 ರಷ್ಟು ಇದೆ ಇದನ್ನು ಶೇ.100 ಮಾಡುವ ಉದ್ದೇಶ ಹೊಂದಲಾಗಿದೆ. ಸಾಕ್ಷರತಾ ಕಾರ್ಯಕ್ರಮ ಹಂತ ಹಂತವಾಗಿ ಪ್ರಗತಿ ಸಾಧಿಸಿ ಮುಂದುವರೆಯುತ್ತಿದೆ. ನಿರಂತರವಾಗಿ ಅಕ್ಷರ ಕಲಿಸುವ ಕಾರ್ಯ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ ಗುರಿ ಮುಟ್ಟಲಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಡಯಟ್ ಪ್ರಾಂಶುಪಾಲ ಪುಷ್ಪಲತಾ, ಸ್ವಾತಂತ್ರ ಹೋರಾಟಗಾರ ಹೆಚ್.ಎಂ.ಶಿವಣ್ಣ, ಎಸ್.ಎಸ್.ಪಾಷ, ಐ.ಎಂ.ಎ.ಜಿಲ್ಲಾ ಅಧ್ಯಕ್ಷ ಡಾ.ಬಶೀರ್, ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಕಾಂತರಾಜ್ ಇತರು ಇದ್ದರು.