ಜಿಲ್ಲೆ

ಕಲಿಕೆಯಿಂದ ದೇಶದ ಪ್ರಗತಿಗೆ ಕೊಡುಗೆ ನೀಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿದ್ಯಾರ್ಥಿಗಳು ತಮ್ಮ ಸಮಯವನ್ನು ಕಲಿಕೆ, ಸ್ವವಿಕಾಸ, ಹಾಗೂ ಉತ್ತಮ ಭವಿಷ್ಯದ ನಿರ್ವಣಕ್ಕಾಗಿ ಶ್ರೇಷ್ಠವಾಗಿ ಬಳಸಲು ಪ್ರೇರಿತರಾಗಬೇಕು. ಮಕ್ಕಳು ಕಲಿಕೆಯ ಜತೆಗೆ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸ್ವರ್ಣ ಸಮೂಹದ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ಭೈರಿದೇವರಕೊಪ್ಪದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಅಮೂಲ್ಯವಾಗಿದ್ದು, ಅದನ್ನು ಸರಿಯಾಗಿ ಬಳಸಬೇಕು. ಅಧ್ಯಯನ, ಹವ್ಯಾಸಗಳು ಮತ್ತು ವಿಶ್ರಾಂತಿ ನಡುವಿನ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ತರಗತಿಗಳಲ್ಲಿ ಶಿಕ್ಷಕರು ಹೇಳಿಕೊಡುವುದನ್ನು ಆಸಕ್ತಿಯಿಂದ ಕಲಿಯುವಂತೆ ಪ್ರೇರೇಪಿಸುವುದರ ಜತೆಗೆ, ಪಾಲಕರು ಮನೆಗಯಲ್ಲಿ ಮಕ್ಕಳಿಗೆ ಗುಣಾತ್ಮಕ ಸಮಯವನ್ನು ಕೊಡುವುದು ಬಹಳ ಮುಖ್ಯ. ಉತ್ತಮ ಅಂಕಗಳನ್ನು ಗಳಿಸುವುದರ ಜತೆಗೆ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಮಕ್ಕಳಿಗೆ ನೈಸರ್ಗಿಕ ಜೀವನ ಪ್ರೀತಿಸುವುದನ್ನು ಕಲಿಸಬೇಕು ಎಂದರು.

ಬಿಇಒ ಉಮೇಶ ಬೊಮ್ಮಕ್ಕನವರ, ಶಾಲೆಯ ಆಡಳಿತಾಧಿಕಾರಿ ಶರ್ವಿುಳಾ ಹೊಸೂರು, ಎಂಡಿ ವೀರಭದ್ರ ರಾವ್, ಅಧ್ಯಕ್ಷ ಜಗನಮೋಹನ ರಾವ್, ಕಾರ್ಯದರ್ಶಿ ಎಂ. ಶ್ರೀಕಾಂತ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ರಾಜಶೇಖರ ಮೆಣಸಿನಕಾಯಿ, ಗಿರೀಶ ಪಟ್ಟಣಶೆಟ್ಟಿ, ಜಗದೀಶ ಮರಳಿ, ಡಾ. ಸಿರೀಷ ಎಲಿಜಬೆತ್,

ಪ್ರವೀಣ ರೋನಾಡ, ಸವಿತಾ ಅಥಣಿ ಹಾಗೂ ಹೇಮಾ ವಾಘಮೋಡೆ ಅವರನ್ನು ಸನ್ಮಾನಿಸಲಾಯಿತು. ಪಾಲಕರು ಉತ್ತರ ಕರ್ನಾಟಕದ ಪಾರಂಪರಿಕ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಜಾನಪದ ಗೀತೆಗಳನ್ನು ಆಧರಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಪ್ರದರ್ಶಿಸಿದರು.