ಕೆ.ಎಂ.ದೊಡ್ಡಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮಕ್ಕಳ ತಜ್ಞ ಡಾ.ಜಿ.ಬಿ.ಮೋಹನ್ ಬಾಬು ಹೇಳಿದರು.
ಸಮೀಪದ ಗುರುದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ನೋಟ್‌ಬುಕ್, ಬ್ಯಾಗ್ ಮತ್ತು ಪಠ್ಯಪರಿಕರಗಳನ್ನು ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಎಷ್ಟೋ ಮಕ್ಕಳು ದೇಶ, ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಚಂದ್ರಯಾನ-3 ತಂಡದಲ್ಲೂ ಇದ್ದಾರೆ ಎಂದರು.
ಈ ಹಿಂದೆ ಸಾಕಷ್ಟು ಸೌಲಭ್ಯಗಳು ಇರಲಿಲ್ಲ. ಇದೀಗ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಸರ್ಕಾರಿ ಶಾಲೆಗಳಿಗೆ ಸರ್ಕಾರ ಅನೂಕೂಲಗಳನ್ನು ಕಲ್ಪಿಸಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಪಾಲ್ಗೊಂಡು ಓದಿದ ಶಾಲೆಗೆ ಕೀರ್ತಿ ತಂದುಕೊಡಬೇಕು ಎಂದು ಹೇಳಿದರು.
ಗ್ರಾಮಸ್ಥರು ಒಗ್ಗೂಡಿ ಸಹಕರಿಸಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತವೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಉಪನ್ಯಾಸಕ ಬಸವೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದರಾಜು, ಮುಖ್ಯ ಶಿಕ್ಷಕಿ ಶಾಂತಮ್ಮ ಇತರರು ಇದ್ದರು.