ಜಿಲ್ಲೆ

ಕಲಿಕೆ, ಕಲೆ ಒಟ್ಟಿಗೆ ಸಾಗಿದರೆ ಉಜ್ವಲ ಭವಿಷ್ಯ

ಮೈಸೂರು: ಕಲಿಕೆ ಮತ್ತು ಕಲೆ ಒಟ್ಟಿಗೆ ಸಾಗಿದರೆ ಯುವಜನರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆ ಒಂದಿದ್ದರೆ ಸಾಲದು. ಅದರೊಂದಿಗೆ ಕಲೆಯೂ ಇರಬೇಕು. ಕಾಲಕ್ಕೆ ತಕ್ಕಂತೆ ವಿಭಿನ್ನ ಕೌಶಲವೂ ಇರಬೇಕು ಎಂದರು.
ಸಮಾಜದಲ್ಲಿ ವ್ಯಕ್ತಿಗೆ ಗುರುತು(ಐಡೆಂಟಿಟಿ) ನೀಡುವುದೇ ಕಲೆ. ಕಲಿಕೆ ಮತ್ತು ಕಲೆ ಒಟ್ಟಿಗೆ ಸಾಗಿದರೆ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂದರು.

2 ಲಕ್ಷ ರೂ. ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಸಮಾಜದಲ್ಲಿ ತಮ್ಮನ್ನು ಗುರುತಿಸುತ್ತಿಲ್ಲ ಎಂಬ ಕೊರಗಿದೆ. ಇವರು ನೃತ್ಯ, ಹಾಡುಗಾರಿಕೆ ಕಲಿಯಬೇಕೆಂದು ಬಯಸುತ್ತಿದ್ದಾರೆ. ಕಲೆಗಳು ಸಮಾಜದಲ್ಲಿ ಗುರುತು ಕೊಡುತ್ತವೆ. ಜತೆಗೆ ಆತ್ಮವಿಶ್ವಾಸವನ್ನೂ ವೃದ್ಧಿಸುತ್ತದೆ. ಬದುಕನ್ನು ರೂಪಿಸಿಕೊಂಡು ಕನ್ನಡ ಭಾಷೆಯನ್ನು ರಕ್ಷಿಸಬೇಕು ಎಂದು ಯುವಜನರಿಗೆ ಕಿವಿಮಾತು ಹೇಳಿದರು.

ಯುವಜನರಿಗೆ ಪದವಿಯೊಂದಿಗೆ ಕೆಲಸವೂ ಇರಬೇಕು. ಯಾವ ಕೆಲಸವಾದರೂ ಮಾಡಲು ಸಜ್ಜಾಗಬೇಕು. ಇವುಗಳೊಟ್ಟಿಗೆ ಸೃಜನಶೀಲತೆ, ಕೌಶಲ ಮೈಗೂಡಿಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಿರುವ ಕೌಶಲವೇ ಬೇರೆ. ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಕೌಶಲವೇ ಬೇರೆ ಎಂದರು.

ತಾಂತ್ರಿಕತೆ ಜಗತ್ತನ್ನು ಆಳುತ್ತಿದೆ. ಸೆನ್ಸ್‌ಗಿಂತ ಲೆನ್ಸ್ ಮುಂದೆ ಇದೆ. ಲೆನ್ಸ್ ಪ್ರಪಂಚ ದೊಡ್ಡದು. ಧೈರ್ಯ ಇರುವ ಪ್ರತಿಭಾವಂತರು ಸಿನಿಮಾ, ಕಿರುತೆರೆ, ಮಾಧ್ಯಮ ರಂಗದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಬೇಕಾದ ತಾಂತ್ರಿಕ ಪರಿಣತಿ ಕರಗತ ಮಾಡಿಕೊಂಡು ಮುಂದೆ ಬರಬೇಕು ಎಂದರು.

ಕೃತಕ ಬುದ್ಧಿ ಯುಗದಲ್ಲಿ ಕರ್ನಾಟಕದ ಜಾನಪದರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಹುಡುಕಿದರೆ ಮಾಹಿತಿ ಸೊನ್ನೆ. ತಾಂತ್ರಿಕ ಯುಗಕ್ಕೆ ಜಾನಪದರು ಬೇಕು. ಮಾಹಿತಿ ಸಂಗ್ರಹಿಸಿ ಅಪ್‌ಲೋಡ್ ಮಾಡಿದರೆ ದೊರೆಯುತ್ತಿದೆ. ಇಲ್ಲವಾದರೆ ನಶಿಸಿಸುತ್ತದೆ ಎಂದು ಎಚ್ಚರಿಸಿದರು.

ಚಿತ್ರಮಂದಿರ ಭರ್ತಿಯಾದರೆ ಹೌಸ್‌ಫುಲ್ ಬೋರ್ಡ್ ಹಾಕುತ್ತಾರೆ. ಇತ್ತೀಚೆಗೆ ಚಿತ್ರಮಂದಿರಗಳು ತುಂಬುತ್ತಿಲ್ಲ. ಮಹಾರಾಜರು ನಡೆದಾಡಿದ ನೆಲದಲ್ಲಿ ನನಗೆ ರಾಜರ ಸ್ವಾಗತ ದೊರೆತಿದೆ. ಇಲ್ಲಿ ದೊರೆತ ಪ್ರೀತಿಯಿಂದ ನನ್ನ ಹೃದಯ ಮಂದಿರ ಭರ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯಾವುದೇ ಅತಿಯನ್ನು ಸಹಿಸುವುದಿಲ್ಲ ಎಂಬುದನ್ನು ಕನ್ನಡಿಗರು ಮತ್ತೆ ಸಾಬೀತುಪಡಿಸಿದ್ದು, ಕೆಲ ವರ್ಷಗಳಿಂದ ಕೆಲ ವಿಷಯಗಳು ಅತಿಯಾಗುವುದರೊಂದಿಗೆ ಮೀತಿ ಮೀರಿತ್ತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿರುವ ಜನರು, ದೋಸೆ ತಿರುವಿದಂತೆ ತಿರುವಿ ಹಾಕಿದರು. ಸಮಾಧಾನ ಇದ್ದರೆ ಸಾಕೆಂದು ತೀರ್ಪು ಕೊಟ್ಟರು. ಆ ಮತ, ಈ ಮತ ಬೇಡ. ನಮಗೆ ಮನುಜ ಮತ ಇರಲಿ ಎಂಬ ಸಂದೇಶವನ್ನು ಜನರು ಸಾರಿದ್ದು, ಕುವೆಂಪು ಆಶಯವನ್ನು ಎತ್ತಿ ಹಿಡಿದ್ದಾರೆ ಎಂದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ, ಪ್ರಾಂಶುಪಾಲ ಡಾ.ಸಿ.ಎ.ಶ್ರೀಧರ್, ಆಡಳಿತಾಧಿಕಾರಿ ಡಾ.ವಿ.ಷಣ್ಮುಗಂ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಡಾ.ಲೋಕೇಶ್ ಇದ್ದರು.