ಜಿಲ್ಲೆ

ಕಲಿಕಾ ಮಟ್ಟ ಪರಿಗಣಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ

ಚಿತ್ರದುರ್ಗ: ನಗರ, ಪಟ್ಟಣಗಳಿಗೆ ಸೀಮಿತವಾಗದೆ, ಗ್ರಾಮೀಣ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಗಣಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಎಂದು ಪಿಯು ಡಿಡಿ ಆರ್.ಪುಟ್ಟಸ್ವಾಮಿ ಸಲಹೆ ನೀಡಿದರು.

ಖಾಸಗಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇತಿಹಾಸ, ಗಣಿತಶಾಸ್ತ್ರ ವಿಷಯದ ಸರ್ಕಾರಿ ಉಪನ್ಯಾಸಕರಿಗೆ ಪುನಶ್ಚೇತನ ಹಾಗೂ ಪ್ರಶ್ನೆ ಪತ್ರಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಉಪನ್ಯಾಸಕ ವಿದ್ಯಾರ್ಥಿಗಳ ಹಿತ ಬಯಸುವ ಪಾಲಕರಂತೆ ಕಾರ್ಯನಿರ್ವಹಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ ಮಾತನಾಡಿ, ಪ್ರತಿ ಉಪನ್ಯಾಸಕರು, ಪ್ರಾಚಾರ್ಯರು ಕರ್ತವ್ಯ ನಿಷ್ಠೆ, ನಂಬಿಕೆ, ಬದ್ಧತೆ, ಪ್ರಾಮಾಣಿಕ ಸೇವೆಯೊಂದಿಗೆ ಕಾರ್ಯನಿರ್ವಹಿಸಲು ಇಲಾಖೆ ಬಯಸುತ್ತಿದೆ. ಹೀಗಾಗಿ ಆತ್ಮಸಾಕ್ಷಿಗೆ ದ್ರೋಹ ಮಾಡದೆ, ತಮ್ಮಲ್ಲಿನ ಜ್ಞಾನ ವಿದ್ಯಾರ್ಥಿಗಳಿಗೆ ಧಾರೆ ಎರೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ಇಲಾಖೆಯ ಬದಲಾದ ಮಾರ್ಗಸೂಚಿ ಅನ್ವಯ ಇನ್ನಿತರೆ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ನಮ್ಮ ಎಕ್ಸ್‌ಪರ್ಟ್ ಪಪೂ ಕಾಲೇಜಿನ ಪ್ರಾಚಾರ್ಯ ಪಿ.ಅರುಣ್ ಕುಮಾರ್, ಗಣಿತಶಾಸ್ತ್ರ ವಿಷಯದ ಸಂಯೋಜಕ ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಕೃಷ್ಣಪ್ಪ, ಎಚ್.ಎಸ್. ಮೈಲಾರ ಲಿಂಗಮ್, ಎನ್.ತಿಮ್ಮಪ್ಪ, ಡಾ.ತಿಮ್ಮಾರೆಡ್ಡಿ, ಡಿ.ವೀರಣ್ಣ, ಮಂಜುನಾಥ್, ಉಮೇಶ್ ಇತರರಿದ್ದರು.