ಹೊಳೆನರಸೀಪುರ : ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಮಕ್ಕಳು ಶಿಕ್ಷಣದಿಂದ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗಿದ್ದರು ಇದರ ತತ್ಪರಿಣಾಮದಿಂದ ಇಲಾಖೆಯು ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ಅದಕ್ಕನುಗುಣವಾಗಿ ಮಕ್ಕಳಿಗೆ ಕಲಿಕಾ ಹಬ್ಬ ಎಂಬ ಕಾರ್ಯಕ್ರಮ ಆಯೋಜಿಸಿಕೊಂಡಿದೆ ಎಂದು ತಾತನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹರೀಶ್ ನುಡಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿ ತಾತನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕ್ಲಸ್ಟರ್ ವತಿಯಿಂದ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ನಾಲ್ಕು ವಿಭಾಗಗಳಲ್ಲಿ ಕಲಿಯುತ್ತಾರೆ.ಊರು ಸುತ್ತೋಣ ,ವಿಜ್ಞಾನ ಸಂಗತಿ ತಿಳಿಯೋಣ, ಹಾಡು ಹಾಡೋಣ ,ಹಬ್ಬ ಆಚರಿಸೋಣ, ಕಾಗದ ಕತ್ತರಿ ಎಂಬ ಶೀರ್ಷಿಕೆ ಯಡಿ ಮಕ್ಕಳು ಕಳೆಯುತ್ತಾರೆ ಎಂದು ತಿಳಿಸಿದರು.
ಕಲಿಕಾ ಹಬ್ಬ ಎಂಬ ಹೆಸರೇ ಹೇಳುವಂತೆ ಇಲ್ಲಿ ಹಬ್ಬದ ಸಡಗರ ಇರುತ್ತದೆ ಒಂದು ಕ್ಲಸ್ಟರ್ ನಿಂದ 120 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಆರನೇ ತರಗತಿಯಿಂದ 9ನೇ ತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಚೆನ್ನಾಗಿ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುತ್ತದೆ. ಹಾಡು ನೃತ್ಯ ಕರಕುಶಲ ಕಲೆಗಳು ಕವನ ರಚಿಸುವುದು ಕಥೆ ಹೆಣೆಯುವುದು ಬಣ್ಣದ ಕಾಗದದಲ್ಲಿ ಹೂವು ಹಾಗೂ ಕ್ರಾಫ್ಟ್ ವರ್ಕ್ ಮಾಡುವುದು ಮರದ ಅಳತೆಯನ್ನು ಅಳೆಯುವುದು ಗ್ರಾಮದ ನಕ್ಷೆಯನ್ನು ಬರೆಯುವುದು ಮರದ ಸಾಂಸ್ಕೃತಿಕ ಮತ್ತು ಇತಿಹಾಸ ತಿಳಿಯುವುದು ಇನ್ನಿತರೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ನಕ್ಕು ನೆಲೆಯುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಾಲಾವರಣವನ್ನು ಸುಂದರವಾಗಿ ವಿವಿಧ ಹೂವುಗಳಿಂದ ಅಲಂಕರಿಸಿ ಹಸಿರು ಮಾವಿನ ತೋರಣ ಕಟ್ಟಿ ಬಣ್ಣದ ಬಟ್ಟಿಂಗ್ಸ್ ಕಟ್ಟಿ ಸಂಭ್ರಮ ಸಡಗರದಿಂದ ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪ್ಪಂ ಮಾಜಿ ಅಧ್ಯಕ್ಷ ಹೇಮಂತ್ ಗೌಡ ವಹಿಸಿದ್ದರು. ಮುಖ್ಯ ಶಿಕ್ಷಕ ಡಿ ಎಸ್ ಕೃಷ್ಣಮೂರ್ತಿ ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಖಜಾಂಚಿ ಗಂಗಾಧರ್ ,ದಾನಿಗಳಾದ ರೇಣುಕೇಶ್ ಇದ್ದರು .ನಿರೂಪಣೆ ಚಂದ್ರಶೇಖರ್, ಸ್ವಾಗತ ಹೆಚ್ ಬಿ ಶಿವಕುಮಾರ್, ವಂದನಾರ್ಪಣೆ ಆರ್ ನಾಗವೇಣಿ ಮಾಡಿದರು.