ಜಿಲ್ಲೆ

ಕಲಾವಿದರು, ಸಂಶೋಧಕರನ್ನು ಪ್ರಿತಿಸುತ್ತಿದ್ದ ಶ್ರೀ

ಅಣ್ಣಿಗೇರಿ: ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು ಕಲಾವಿದರ, ಸಂಶೋಧಕರನ್ನು ಪ್ರೋತ್ಸಾಹಿಸಿ ಅವರ ಮೇಲೆ ಅಪಾರ ಪ್ರೀತಿಯುಳ್ಳರಾಗಿದ್ದರು ಅಂಥವರ ಹೆಸರಿನಲ್ಲಿ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಸಂಶೋಧಕ ಡಾ. ವೀರಣ್ಣ ರಾಜೂರಗೆ ನೀಡಿದ್ದು, ಆ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ಗದಗ ತೋಂಟದ ಸಂಸ್ಥಾನಮಠದ ಜಗುದ್ಗುರು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಪಟ್ಟಣದ ಶ್ರೀಮತಿ ನಿಂಗಮ್ಮಾ ಹೂಗಾರ ಕಾಲೇಜ್ ಆವರಣದಲ್ಲಿ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಸಮಿತಿಯಿಂದ ಮೊದಲ ಬಾರಿಗೆ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿದ ಸಾಹಿತ್ಯ-ಸಂಸ್ಕೃತಿ ಸಂಶೋಧಕ ಡಾ. ವೀರಣ್ಣ ರಾಜೂರ ಮಾತನಾಡಿ, ಆದಿಕವಿ ಪಂಪ ಜನಿಸಿದ ನಾಡು ಅಣ್ಣಿಗೇರಿ. ಇಲ್ಲಿನ ಜನತೆ ಹೃದಯ ಶ್ರೀಮಂತಿಕೆಯುಳ್ಳವರಾಗಿದ್ದಾರೆ. ಈ ಹಿಂದೆ ಆಯೋಜಿಸಿದ್ದ ಪಂಪನ ವಿಚಾರ ಸಂಕಿರಣದಲ್ಲಿ ನಾಡಿನ ಸಂಶೋಧಕರನೇಕರು ಬಂದಿದ್ದರು. ನನಗೆ ದೊರೆತಿರುವ ಈ ಪ್ರಶಸ್ತಿಯನ್ನು ಆರ್.ಸಿ. ಹಿರೇಮಠ, ಎಂ.ಎಂ. ಕಲಬುರ್ಗಿ ಅವರಿಗೆ ಸಲ್ಲಿಸುತ್ತೇನೆ. ನನ್ನ ಎಲ್ಲ ಪ್ರಶಸ್ತಿಗಳಿಗಿಂತ ಈ ಪ್ರಶಸ್ತಿಯು ನನಗೆ ಮೌಲ್ಯದ್ದಾಗಿದ್ದು ಪೂಜ್ಯರ ಹೆಸರಲ್ಲಿ ಆಶಿವಾದ ರೂಪದಲ್ಲಿ ಪ್ರಶಸ್ತಿ ನೀಡಿದ್ದಿರಿ ಎಂದರು.

ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ರಂಜಾನ ದರ್ಗಾ ಮಾತನಾಡಿ, ವೀರಣ್ಣ ಅವರು ಯಾವುದೇ ಮಹಾತ್ವಕಾಂಕ್ಷೆ ಹೊಂದದೆ ಸಾಧನೆ ಮಾಡಿದ್ದಾರೆ. ಅವರು ಯಾವ ಪ್ರಶಸ್ತಿಗೂ, ಹುದ್ದೆಗೂ ಆಸೆಪಟ್ಟವರಲ್ಲ. ಅಲ್ಲದೆ, ಸರಳತೆಯಿಂದ ಬದುಕು ಸವೆಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ-ಸಂಸ್ಕೃತಿ ಸಂಶೋಧಕ ಡಾ. ವೀರಣ್ಣ ರಾಜೂರ ಅವರಿಗೆ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯ ಪ್ರಶಸ್ತಿಯನ್ನು ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ರಂಜಾನ ದರ್ಗಾ ಪ್ರದಾನ ಮಾಡಿದರು. ಕಾಯಕ ಜೀವಿಗಳಾದ ಬಸಪ್ಪ ಪಲ್ಲೇದ, ಶಿವಪ್ಪ ಹೊಸಮನಿ, ಕರಿಯಪ್ಪ ಕೌಜಗೇರಿ, ಎ.ಐ. ನಡಕಟ್ಟಿನ, ಸಂಗಯ್ಯ ಹುಣಶೀಮರದ, ಮೆಹಬೂಬ ಬಿಸ್ತಿ, ಚನ್ನಬಸಯ್ಯ ಹಗೇದಕಟ್ಟಿಮಠ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಬಿ. ಸುರಕೋಡ, ಸಿ.ಎಸ್. ಹುಬ್ಬಳ್ಳಿ, ಹಾಲಪ್ಪ ತುರಕಾಣಿ, ಪ್ರಭಣ್ಣ ಉಳ್ಳೇಗಡ್ಡಿ, ಪ್ರೊ. ಎಸ್.ಎಸ್. ಹರ್ಲಾಪೂರ, ಮುತ್ತಣ್ಣ ನವಲಗುಂದ, ಶಿವಯೋಗಿ ಹುಬ್ಬಳ್ಳಿ, ಚಂದ್ರಶೇಖರ ವಸ್ತ್ರದ, ಡಾ.ಸುಧಾ ಎಸ್. ಕೌಜಗೇರಿ, ಶಶಿಧರ ತೋಡಕರ, ಮುತ್ತಣ್ಣ ಹಾಳದೋಟರ, ಇಂದಿರಾ ಪಿ. ದ್ಯಾವನೂರ, ಇತರರು ಉಪಸ್ಥಿತರಿದ್ದರು.

ಜ್ಯೋತಿ ಕಟ್ಟಿಸ್ವಾಮಿಮಠ, ಶಾಂತಾ ಲಕ್ಷ್ಮೇಶ್ವರ, ಎ.ಐ. ಹುಬ್ಬಳ್ಳಿ, ಶಾಂತಕುಮಾರ ಹರ್ಲಾಪೂರ ಹಾಗೂ ವೇದಾವತಿ ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.