ಜಿಲ್ಲೆ

ಕಲಾವಿದರು ತಂತ್ರಜ್ಞಾನ ರೂಢಿಸಿಕೊಳ್ಳಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದು ತಂತ್ರಜ್ಞಾನ ಸಾಕಷ್ಟು ಮುಂದೆವರೆದಿದೆ. ಅದನ್ನು ಕಲಾವಿದರು ರೂಢಿಸಿಕೊಳ್ಳಕು. ಕಲಾವಿದ ಇವತ್ತಿನ ಜಗತ್ತಿಗೆ ತೆರೆದುಕೊಳ್ಳುವುದು ಅವಶ್ಯವಿದೆ ಎಂದು ಮೈಸೂರಿನ ಹಿರಿಯ ಸಾಹಿತಿ ಜಗದೀಶ ಕೊಪ್ಪ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕಲಾವಿದ ಬಿ. ಮಾರುತಿ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ತಾರ ಚೇತನ ಪ್ರಶಸ್ತಿ-2023ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕರ್ನಾಟಕದ ಕಲಾವಿದ ತನ್ನ ಕಲಾ ಕೃತಿಗೆ ಎಷ್ಟು ಹಣ ಬರಬಹುದು ಎಂಬ ಲೆಕ್ಕಾಚಾರ ಮಾಡುತ್ತಾನೆ. ಆದರೆ ಉತ್ತರ ಕರ್ನಾಟಕದ ಕಲಾವಿದನಲ್ಲಿ ಇದನ್ನು ಕಾಣುವುದಿಲ್ಲ. ಬಹಳ ಉದಾರತೆಯಿಂದ ತನ್ನ ಕಲಾಕೃತಿ ನೀಡುವರು. ಈ ನೆಲದ ಕಲಾವಿದರು ಹಣಕ್ಕಿಂತ ಕಲೆ ಪ್ರೀತಿಸುವವರಾಗಿದ್ದಾರೆ. ಇಂದು ಕಲೆ ನಂಬಿ ಕಲಾಕೃತಿ ಮಾರಿ ಬದುಕುತ್ತೇನೆ ಎಂಬ ವಿಶ್ವಾಸವಿಲ್ಲ. ಅದರೊಟ್ಟಿಗೆ ಪರ್ಯಾಯ ಉದ್ಯೋಗ ಕಲಾವಿದನಿಗೆ ಅನಿವಾರ್ಯ ಎಂದರು.
ಡಾ. ಬಸವರಾಜ ಕುರಿಯವರ ಮಾತನಾಡಿ, ಚಿತ್ರಕಲೆ 50 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಕಲೆ. ಸಾವಿರಾರು ಪದಗಳಲ್ಲಿ ಹೇಳುವ ಶಕ್ತಿ ಚಿತ್ರಕಲೆಗಿದೆ. ಇಂದಿನ ಶಿಕ್ಷಣದಲ್ಲಿ ಕಲೆಗೆ ಪ್ರೋತ್ಸಾಹ ಸಿಗದಿರುವುದು ವಿಷಾದನೀಯ. ಮಗುವಿನಲ್ಲಿ ಸೃಜಶೀಲತೆಗೆ ಅವಕಾಶ ಸಿಕ್ಕಾಗ ಮಕ್ಕಳ ಮನಸ್ಸು ಅರಳುತ್ತದೆ. ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಂಗೀತ, ಕಲೆಗೆ ಶಾಲಾ ಶಿಕ್ಷಣದಲ್ಲಿ ಸ್ಥಾನ ನೀಡುವಲ್ಲಿ ಶಿಕ್ಷಣ ಇಲಾಖೆ ಒತ್ತು ಕೊಡಬೇಕಿದೆ ಎಂದರು.
ಪ್ರತಾಪ ಬಹುರೂಪಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸೌಜನ್ಯ ಕರಡೋಣಿಗೆ ಚಿತ್ತಾರ ಚೇತನ ಪ್ರಶಸ್ತಿ-2023 ಪ್ರದಾನ ಮಾಡಿ ಗೌರವಿಸಲಾಯಿತು.
ಬಿ. ಮಾರುತಿ, ದೀಪಕ, ಸುಪ್ರಿಯಾ, ಬಸವಪ್ರಭು ಹೊಸಕೇರಿ, ನಿಂಗಣ್ಣ ಕುಂಟಿ, ಸಿ.ಯು. ಬೆಳ್ಳಕ್ಕಿ, ಕೆ.ಎಚ್.ನಾಯಕ, ಡಿ.ಬಿ. ಕರಡೋಣಿ, ಶಶಿಧರ ತೋಡಕರ, ಎಂ.ಎಂ. ಚಿಕ್ಕಮಠ, ಇತರರು ಇದ್ದರು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಡಾ. ಶ್ರೀಶೈಲ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.