ಜಿಲ್ಲೆ

ಕಲಾವಿದರಿಗೆ ಗುರುತಿನ ಚೀಟಿ ಕೊಡಿ

ಬೀದರ್: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕು ಎಂದು ಕಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ನಿಯೋಗ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ ಅವರಿಗೆ ಮನವಿ ಸಲ್ಲಿಸಿ, ಇಲಾಖೆಯಿಂದ ರಾಜ್ಯದ ಕಲಾವಿದರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಈಗಾಗಲೇ ಕೆಲ ಜಿಲ್ಲೆ ಕಲಾವಿದರಿಗೆ ನೀಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಕಲಾವಿದರಿಗೆ ಈವರೆಗೂ ನೀಡಿಲ್ಲ ಎಂದು ಗಮನ ಸೆಳೆದಿದೆ.
ಗುರುತಿನ ಚೀಟಿ ನೀಡುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ತಕ್ಷಣ ಈ ಭಾಗದ ಎಲ್ಲ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಸದಸ್ಯರಾದ ಶಿವಕುಮಾರ ಎಚ್.ಎಂ., ಫಣೇಂದ್ರ ಪ್ರಸಾದ ನಿಯೋಗದಲ್ಲಿದ್ದರು.