ಜಿಲ್ಲೆ

ಕಲಾವಿದರಿಗೆ ಎಂದೂ ಸಾವಿಲ್ಲ: ಎಂಎಲ್ ಸಿ ಮಂಜೇಗೌಡ ಅಭಿಮತ

reportermys

ಮೈಸೂರು: ಮಹಾನಾಯಕರು, ಮಹಾಪುರುಷರು ಹಾಗೂ ಕಲಾವಿದರಿಗೆ ಸಾವಿಲ್ಲ. ಸಾಧನೆಗಳ ಮೂಲಕ ಅವರು ಸದಾಕಾಲ ನಮ್ಮೊಂದಿಗೆ ಜೀವಂತವಾಗಿ ಇರುತ್ತಾರೆ. ಅದೇ ರೀತಿ ಪುನೀತ್‌ರಾಜಕುಮಾರ್ ಮರೆಯಲಾಗದ ಮಹಾಪುರುಷರಾಗಿ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಬಣ್ಣಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ಸಿದ್ದೇಗೌಡರ ಅಭಿಮಾನಿ ಬಳಗದಿಂದ ಇತ್ತೀಚೆಗೆ ಆಯೋಜಿಸಿದ್ದ ‘ಪುನೀತ ಪರ್ವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಜನರ ಜೀವನದ ದಿಕ್ಕನ್ನೇ ಬದಲಾಯಿಸಿತು. ಪುನೀತ್‌ರಾಜ್‌ಕುಮಾರ್ ಅವರೂ ತಂದೆಯಂತೆ ಉತ್ತಮ ಕಲಾವಿದರಾಗಿ ನಾಡಿಗೆ ಸಂದೇಶ ಕೊಡುವಂಥ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎಂದರು.
ಕಿರಿಯ ವಯಸ್ಸಿನಲ್ಲೇ ರಾಜ್ಯ, ರಾಷ್ಟ್ರ ಪ್ರಶಸ್ತಿ ಗಳಿಸಿ ಎಲೆಮರೆ ಕಾಯಿಯಂತೆ ಸಾಮಾಜಿಕ ಸೇವೆ ಮಾಡುತ್ತ ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಗಲಿರುವುದು ಕಾಡುತ್ತಿದೆ. ಪುನೀತ್‌ರಾಜಕುಮಾರ್ ಮತ್ತೊಮ್ಮೆ ಈ ಭೂಮಿ ಮೇಲೆ ಹುಟ್ಟಿಬರಲಿ ಎಂದು ಆಶಿಸಿದರು.
ಮೈಮುಲ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ ಮಾತನಾಡಿ, ಪುನೀತ್‌ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ದೇಶ ವಿದೇಶಗಳಲ್ಲಿ ಮಾಡುತ್ತಿರುವುದನ್ನು ನೋಡಿದರೆ ಅವರು ತಂದೆಯನ್ನೂ ಮೀರಿಸಿದ ಮಗ. 46 ವರ್ಷದಲ್ಲಿ ಪುನೀತ್ ಮಾಡಿರುವ ಸಾಧನೆಯನ್ನು ಯಾರೂ ಮಾಡಿಲ್ಲ. ಪುನೀತ್‌ರಾಜಕುಮಾರ್ ಜನರ ಮನಸ್ಸಿನಲ್ಲಿ ನಡೆದಾಡುವ ದೇವರಾಗಿದ್ದಾರೆ. ಇತರರಿಗೆ ತಿಳಿಯದಂತೆ ಅವರು ಮಾಡಿರುವ ನಿಸ್ವಾರ್ಥ ಸಾಧನೆ, ಸಮಾಜ ಸೇವೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಕೆಂಪನಾಯ್ಕ ಮಾತನಾಡಿದರು. ಮುಖಂಡರಾದ ಶ್ರೀರಾಂಪುರ ರಮೇಶ್, ಸೋಮಣ್ಣ, ನಾಗೇಶ್ ಇತರರು ಇದ್ದರು.