ಜಿಲ್ಲೆ

ಕಲಾವಿದರನ್ನು ಗೌರವಿಸುವ ಮಹೋತ್ಸವ

ಹಳೇಬೀಡು: ಕಲಾವಿದರಿಗೆ, ವಿದ್ವಾಂಸರಿಗೆ ವೇದಿಕೆ ಕಲ್ಪಿಸಿ ಅವರ ಜ್ಞಾನವನ್ನು ಒರೆಗೆ ಹಚ್ಚುವ ಇಂತಹ ಕಾರ್ಯಕ್ರಮವು ವರ್ಷವಿಡೀ ನಡೆದರೂ ತಪ್ಪಿಲ್ಲ ಎಂದು ಬಹುಭಾಷಾ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ತ್ರಿಭಾಷಾ ಕವಿ ಜಿನವಲ್ಲಭ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ತರಳಬಾಳು ಮಠವು ಜ್ಞಾನಾಕಾಂಕ್ಷಿಗಳನ್ನು ಗೌರವದಿಂದ ಕಾಣುತ್ತದೆ. ಹೃದಯವಂತಿಕೆಯನ್ನು ಬೆಳೆಸುವ ಮತ್ತು ಸಂಚಾರಿ ಅನುಭವ ಮಂಟಪದಂತೆ ಇರುವ ಈ ಮಹೋತ್ಸವವನ್ನು ಎಲ್ಲೇ ಆಚರಿಸಿದರೂ ಯಶಸ್ವಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಗ್ಗೇಯಕಾರರಿಂದ ಜಿನ ಸಾಹಿತ್ಯ ಜೀವಂತ:
ತ್ರಿಭಾಷಾ ಕವಿ ಜಿನವಲ್ಲಭನ ಕಂದಪದ್ಯಗಳು ತೆಲುಗು ಭಾಷೆಯಲ್ಲೂ ಹೆಚ್ಚು ಪ್ರಚಲಿತವಾಗಿವೆ. ಅಲ್ಲಿನ ವಾಗ್ಗೇಯಕಾರರು ಪ್ರಾಚೀನ ಜಿನ ಸಾಹಿತ್ಯವನ್ನು ಜೀವಂತವಾಗಿಟ್ಟಿದ್ದಾರೆ ಎಂದು ಡಾ.ಹಂಪ ನಾಗರಾಜಯ್ಯ ಹೇಳಿದರು.

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸುಲಲಿತವಾಗಿ ಸಾಹಿತ್ಯವನ್ನು ಸೃಷ್ಟಿಸುವ ಪಾಂಡಿತ್ಯ ಜಿನವಲ್ಲಭನಿಗೆ ಇತ್ತು. ಅನೇಕ ಶಾಸನಗಳಲ್ಲಿ ಆತನ ಹೆಸರನ್ನು ಕಾಣಬಹುದು. ಜೈನ ಸಾಹಿತಿಗಳು ಪರಧರ್ಮ ಸಹಿಷ್ಣುಗಳಾಗಿದ್ದರಿಂದ ಅನ್ಯ ಮತೀಯ ಸಾಹಿತ್ಯವನ್ನೇ ಹೆಚ್ಚು ಬರೆದಿದ್ದಾರೆ. ಆದರೆ, ಜಿನವಲ್ಲಭನ ಪ್ರಕಾರವು ಸಮನ್ವಯತೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.

ಹೊಯ್ಸಳ ದೇಗುಲಗಳಲ್ಲಿ ಆಧ್ಯಾತ್ಮ ಎಂಬ ವಿಷಯದ ಬಗ್ಗೆ ಸಂಶೋಧಕ ಶ್ರೀವತ್ಸ ಎಸ್.ವಟಿ ಮಾತನಾಡಿ, ಆಧ್ಯಾತ್ಮ ಹಾಗೂ ದೇವಾಲಯಗಳಿಗೆ ಅವಿನಾಭಾವ ಸಂಬಂಧವಿದ್ದು ಮನುಷ್ಯ ಹೇಗೆ ವಾಸಿಸಲು ಮನೆ ಕಟ್ಟಿಕೊಂಡನೊ ಹಾಗೆಯೇ ದೇವರಿಗೆ ಗೌರವಪೂರ್ವಕವಾಗಿ ದೇಗುಲಗಳನ್ನು ನಿರ್ಮಿಸಲು ಆರಂಭಿಸಿದ್ದನ್ನು ತಿಳಿಯಬಹುದು ಎಂದರು.

ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಶರಣಪ್ಪ ಹಲಸೆ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮಾತನಾಡಿದರು. ಜಾನಪದ ಸಾಹಿತಿ ಶಂಭು ವಿ.ಬಳಿಗಾರ್ ಹಾಗೂ ಡಾ.ಕೆ.ಎಸ್. ಸೋಮಶೇಖರ್ ಉಪನ್ಯಾಸ ನೀಡಿದರು. ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಬೇಲೂರು ವೀರಶೈವ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣಾ, ಡಿವೈಎಸ್‌ಪಿ ಸಿದ್ಧರಾಮೇಶ್ವರ್, ಜಿಪಂ ಸದಸ್ಯೆ ಲತಾ ದಿಲೀಪ್ ಮತ್ತಿತರರಿದ್ದರು.

ನಮ್ಮ ತಂದೆಗೆ ಗುರುಗಳ ಆಶೀರ್ವಾದವಿದೆ
ಬಿಎಸ್‌ವೈ ಉಪಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧ ಮಾಡಿ ದಿಟ್ಟತನ ತೋರಿದ್ದರು. ಈಗಲೂ ಮದ್ಯನಿಷೇಧ ಮಾಡಲು ಸರ್ಕಾರ ಸಿದ್ಧವಿದೆ. ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.

ಮರಾಠ ಸಾಮ್ರಾಜ್ಯದ ಸ್ಥಾಪನೆಗೆ ರಾಮದಾಸರು, ವಿಜಯನಗರದ ಹುಟ್ಟಿಗೆ ವಿದ್ಯಾರಣ್ಯರು ಕಾರಣವಾಗಿರುವಂತೆ ಬಿ.ಎಸ್.ಯಡಿಯೂರಪ್ಪನವರ ಯಶಸ್ಸಿನ ಹಿಂದೆ ಈ ನಾಡಿನ ಮಠಾಧೀಶರ ಕರುಣೆ, ಆಶೀರ್ವಾದವಿದೆ. ತರಳಬಾಳು ಶ್ರೀಗಳು ನಮಗೆ ಅವಿರತವಾಗಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ರಾಜಕೀಯದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನನಗೆ ನಿಮ್ಮೆಲ್ಲರ ಮಾರ್ಗದರ್ಶನದ ಅಗತ್ಯವಿದೆ. ಗುರು-ಹಿರಿಯರ ಬಲದಿಂದ ಜನಸೇವೆ ಮಾಡುವ ಬಯಕೆ ನನ್ನಲ್ಲಿದ್ದು ಅದಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕಿದೆ ಎಂದು ಹೇಳಿದರು.