ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಎಸ್.ಬಿ.ಜಂಗಮಶೆಟ್ಟಿ ರಾಜ್ಯಮಟ್ಟದ ರಂಗ ಪುರಸ್ಕಾರವನ್ನು ಹುಬ್ಬಳ್ಳಿ ಕಲಾವಿದ ಪ್ರಶಾಂತ ಹಿರೇಮಠ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ತುಮಕೂರಿನ ಕಲಾವಿದೆ ಪ್ರೇಮಾ ಹೊಸಮನಿ ಅವರಿಗೆ ಪ್ರದಾನ ಮಾಡಲಾಯಿತು. ಶ್ರೀನಿವಾಸ ಸರಡಗಿ ಶ್ರೀ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಶೇಖ ಮಾಸ್ತರ್, ಡಾ.ಸುಜಾತಾ ಜಂಗಮಶೆಟ್ಟಿ, ಶಿವಗೀತಾ ಬಸವಪ್ರಭು, ಮಹಿಪಾಲರೆಡ್ಡಿ ಮುನ್ನೂರ, ಬಿ.ಎಚ್. ನಿರಗುಡಿ ಇತರರಿದ್ದರು.  
ಜಿಲ್ಲೆ

ಕಲಾವಿದರ ಮೇಲಿದೆ ಸಾಮಾಜಿಕ ಹೊಣೆಗಾರಿಕೆ

ಕಲಬುರಗಿ: ರಂಗಭೂಮಿ ಕಲಾದವಿದರ ಮೇಲೆ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆ ಇದೆ. ರಂಗಭೂಮಿ ಜೀವನ ಪಾಠಶಾಲೆ ಇದ್ದಂತೆ. ಅಂತಲೇ ಅವರು ಸಮಾಜಮುಖಿ ಸಂದೇಶಗಳನ್ನು ಕೊಡುವಂತಹ ಕೆಲಸ ಮಾಡುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾ ವೇದಿಕೆ ಮಂಗಳವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಹಿರಿಯ ರಂಗಕರ್ಮಿ ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ಹುಬ್ಬಳ್ಳಿ ಕಲಾವಿದ ಪ್ರಶಾಂತ ಹಿರೇಮಠ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ತುಮಕೂರಿನ ಕಲಾವಿದೆ ಪ್ರೇಮಾ ಹೊಸಮನಿ ಅವರಿಗೆ ಪ್ರದಾನ ಮಾಡಿ ಮಾತನಾಡಿ, ರಂಗ ಕಲಾವಿದರು ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಶ್ಲಾಘಿಸಿದರು.

ರಂಗಭೂಮಿಯಿAದ ಚಿತ್ರರಂಗಕ್ಕೆ ಬಂದಿರುವ ಕಲಾವಿದರ ಸಾಮಾಜಿಕ ಹೊಣೆಗಾರಿಕೆ ಹಾಗೂ ನೇರವಾಗಿ ಸಿನಿಮಾಕ್ಕೆ ಬಂದವರ ಹೊಣೆಗಾರಿಕೆಯನ್ನು ಒಮ್ಮೆ ಸೂಕ್ಷö್ಮವಾಗಿ ಗಮನಿಸಿ. ರಂಗಭೂಮಿಯಿಂದ ಬಂದ ಡಾ.ರಾಜಕುಮಾರ್ ಅವರಂಥ ಕಲಾವಿದರ ನಡವಳಿಕೆಗೂ, ಉಳಿದವರ ನಡವಳಿಕೆಯನ್ನು ಗಮನಿಸಿ ಹೇಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕೆಲ ನಟರ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ಕಲಾವಿದರು ಮಾರಿಕೊಂಡರೆ ಅವರನ್ನು ಅನುಕರಿಸುವ ಯುವ ಸಮೂಹ ಹಾಳಾಗುತ್ತದೆ. ಹಿಂದಿ ಚಿತ್ರರಂಗದವರು ಸಮಾಜಕ್ಕೆ ಮಾರಕವಾಗಿರುವ ಜಾಹೀರಾತುಗಳನ್ನು ಮಾಡುತ್ತಿದ್ದು, ಅವರನ್ನು ಅನುಕರಿಸುವವರ ಗತಿ ಏನಾಗಬೇಡ ಎಂದು ಖಾರವಾಗಿ ಪ್ರಶ್ನಿಸಿದ ಪ್ರೊ.ಸಿದ್ಧರಾಮಯ್ಯ, ರಂಗಭೂಮಿ ಕಲಾವಿದರು ಇಂತಹ ಕೆಲಸ ಮಾಡಿದವರಲ್ಲ, ಮಾಡುವುದೂ ಇಲ್ಲ. ಹೀಗಾಗಿ ಕಲಾವಿದರು ಜನರಿಗೆ ಉತ್ತಮ ಸಂದೇಶ ನೀಡುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀನಿವಾಸ ಸರಡಗಿಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ರಂಗ ಸಂಗಮ ಕಲಾ ವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು, ಪ್ರಮುಖರಾದ ಬಸವಪ್ರಭು ಶಾಂತರಸ, ಬಸವಪ್ರಭು, ಮಿಲಿಂದ ಮಡಕಿ, ವಿಶ್ವರಾಜ, ಅಪ್ಪಾರಾವ ಅಕ್ಕೋಣಿ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಎಸ್.ಎಸ್. ಗುಬ್ಬಿ, ರವಿ ಬಿರಾದಾರ ಕಮಲಾಪುರ, ಸದಾನಂದ ಪೆರ್ಲ, ರವೀಂದ್ರ ಶಾಬಾದಿ, ಶಂಕ್ರಯ್ಯ ಘಂಟಿ, ಸಿದ್ಧರಾಮ ಹೊನ್ಕಲ್, ಪ್ರಭುಲಿಂಗ ನೀಲೂರೆ, ಬಮ್ಮನಳ್ಳಿ ಸ್ವಾಮಿ, ಸಿದ್ದಪ್ಪ ತಳ್ಳಳ್ಳಿ, ಮೋಹನ ಸೀತನೂರ, ಶರಣಗೌಡ ಪಾಳಾ, ಅಂಬಾರಾಯ ಕೋಣೆ, ನಾರಾಯಣ ಕುಲಕರ್ಣಿ, ಕೆ.ಪಿ.ಗಿರಿಧರ ಇತರರಿದ್ದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ-ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿ ನಿರೂಪಣೆ ಮಾಡಿದರು. ಬಿ.ಎಚ್.ನಿರಗುಡಿ ವಂದಿಸಿದರು.

ಪ್ರೇಮಾರ ಲಠಿಕೆ ತೆಗೆದ ಸುಜಾತಾ
ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರಕ್ಕೆ ಭಾಜನರಾದ ತುಮಕೂರಿನ ಪ್ರೇಮಾ ಹೊಸಮನಿ ಮಾತನಾಡಿದ ಬಳಿಕ ತಮ್ಮ ಆಸನಕ್ಕೆ ಮರಳುವಾಗ ತಕ್ಷಣ ಎದ್ದು ಬಂದ ರಂಗಸಂಗಮ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ಪ್ರೇಮಾ ಅವರ ಲಠಿಕೆ ತೆಗೆಯುವ ಮೂಲಕ ಪ್ರೀತಿ ಮೆರೆದರು. ಅದಕ್ಕೂ ಮೊದಲು ಮಾತನಾಡಿದ ಪ್ರೇಮಾ, ನಾನು ಅಭಿನಯಿಸಿ ನಾಟಕದ ಡೈಲಾಗ್ ಹೇಳಬಲ್ಲೆ, ವೇದಿಕೆಯಲ್ಲಿ ಮಾತನಾಡು ಎಂದರೆ ಕೈಕಾಲು ನಡುಗುತ್ತದೆ. ಈ ಪ್ರಶಸ್ತಿ ಬಂದಿದ್ದು ತುಂಬ ಖುಷಿಯಾಗಿದೆ ಎಂದು ಕೆಲಕ್ಷಣ ಭಾವುಕರಾದರು. ಖಾನಾವಳಿ ಚೆನ್ನಿ, ಮಲ ಮಗಳು, ಬಸ್ ಕಂಡಕ್ಟರ್ ನಾಟಕದ ಕೆಲವೊಂದು ಡೈಲಾಗ್ ಹೇಳಿ, ಮುಗಿಲ ಮೇಲೆ ಸಾವಿರಾರು ಹರಡಿದಾಂಗ ಕನ್ನಡಿಚೂರು ಎಂಬ ಹಾಡು ಹಾಡಿ ಗಮನ ಸೆಳೆದರು. ೭೦ರ ಇಳಿ ವಯಸ್ಸಿನಲ್ಲಿಯೂ ರಂಗಗೀಳು ಕಡಿಮೆಯಾಗಿಲ್ಲ. ನನಗೆ ಇನ್ನೂ ಪಾತ್ರ ಮಾಡುವ ಹುಮ್ಮಸ್ಸಿದೆ. ಆದರೆ ಕಾಲು ನೋವಿನಿಂದ ಮಾಡಲಾಗುತ್ತಿಲ್ಲ ಎಂದರು. ಸರ್ಕಾರ ನೀಡುವ ೨ ಸಾವಿರ ರೂ. ಪಿಂಚಣಿಯಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಹೇಳುವಾಗ ಕಣ್ಣಾಲೆ ತೇವಗೊಂಡಿದ್ದವು. ಕಲಾವಿದರಿಗೆ ಪ್ರಶಸ್ತಿ ಜತೆಗೆ ತೊಗರಿ ಬೇಳೆಯನ್ನೂ ಉಡುಗೊರೆಯಾಗಿ ನೀಡಲಾಯಿತು.

ಕಲಾವಿದರ ಬದುಕು ಬಾಡಿಗೆ ಮಾತುಗಳಲ್ಲೇ ಕಳೆದು ಹೋಗುತ್ತದೆ. ಕಲಾವಿದ ಸಿಟಿ ಬಸ್ ನಿಲ್ದಾಣ ಇದ್ದಂತೆ. ಬಸ್ಸುಗಳು ಬಂದು ಹೋದಂತೆ ಎಲ್ಲ ತೆರನಾದ ಪಾತ್ರಗಳಿಗೆ ಈ ಕಾಯವನ್ನು ಅರ್ಪಿಸಿಕೊಳ್ಳುತ್ತೇವೆ. ನಟನೆಯಲ್ಲಿ ಸಂರಕ್ಷಣ ಭಾವವಿದೆ. ನಟನೆ ತೃಪ್ತಿ ತಂದಿದೆ. ಈ ಪ್ರಶಸ್ತಿ ನನಗೆ ಹೊಸ ಗರಿಯನ್ನು ಮೂಡಿಸಿದೆ.
| ಪ್ರಶಾಂತ ಹಿರೇಮಠ ಹುಬ್ಬಳ್ಳಿ ಕಲಾವಿದ

ಕಲಾವಿದರ ಕಡೆಗೆ ಸರ್ಕಾರ ಹೆಚ್ಚು ಗಮನ ಹರಿಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ಅನುವು ಮಾಡಿಕೊಡಬೇಕು. ಜಂಗಮಶೆಟ್ಟಿ ರಂಗ ಪುರಸ್ಕಾರ ಪ್ರತಿಷ್ಠಿತವಾಗಿ ಬೆಳೆದಿದೆ. ಇನ್ನಷ್ಟು ಬೆಳೆಯಲು ಹೊರರಾಜ್ಯದ ಕಲಾವಿದರಿಗೂ ಅವಕಾಶ ಕೊಡಿ. ಇದರಿಂದ ಬೇರೆ ಕಡೆ ಕೀರ್ತಿ ಪಸರಿಸುವಂತಾಗಲಿ.
| ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಮಠ

ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಅತ್ಯಂತ ಹಿರಿಯರು ಮತ್ತು ಶ್ರೇಷ್ಠ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪ್ರಶಸ್ತಿ ಲಭಿಸಿದ ಒಂದೆರಡು ವರ್ಷದಲ್ಲೇ ನಾಟಕ ಅಕಾಡೆಮಿ ಪ್ರಶಸ್ತಿ ಸಿಗುತ್ತಿವೆ. ಇದು ಶ್ರೇಷ್ಠ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
| ಶೇಖ ಮಾಸ್ತರ್
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ