ರಾಯಬಾಗ: ರಾಜ್ಯಾದ್ಯಂತ ನಾಟಕಗಳ ಪ್ರದರ್ಶನದಿಂದ ಬರುವ ಅಲ್ಪ ಹಣದಿಂದ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕನ್ನಡ ರಂಗಭೂಮಿ ಹಿರಿಯ ಕಲಾವಿದರಿಗೆ ಆಶ್ರಮ ಕಟ್ಟುವ ಉದ್ದೇಶದಿಂದ ನಾಟಕ ಪ್ರದರ್ಶನ ಮಾಡುತ್ತಿರುವುದಾಗಿ ಹಿರಿಯ ಕಲಾವಿದೆ ಡಾ.ಪಂಕಜ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಜೈನ ಬಸದಿಯ ಗುರುಭವನದಲ್ಲಿ ಮೇ ೧೧ರಂದು `ಗೌಡ್ರಗದ್ಲ' ಹಾಸ್ಯ ನಾಟಕ, ಮೇ.೨೫ರಂದು ಹಾರೂಗೇರಿಯ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕನ್ನಡ ಕಲಾವಿದರಿಗೆ ಸಹಾಯ ಮತ್ತು ಪ್ರೋತ್ಸಾಹ ನೀಡಬೇಕು ಎಂದರು.
ರಂಗಭೂಮಿ ಮತ್ತು ಚಿತ್ರರಂಗ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾಟಕ ಪ್ರದರ್ಶನಗಳ ಮೂಲಕ ಹಣ ಸಂಗ್ರಹ ಮಾಡಿ ನೆರವು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಕಲಾವಿದರ ಮಾಸಾಶನ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಹಿರಿಯ ಕಲಾವಿದೆ ಲಲಿತಾ ಇದ್ದರು.