ಜಿಲ್ಲೆ

ಕಲಾವಿದರ ಮಾಸಾಶನ 2500 ರೂ.ಗೆ ಹೆಚ್ಚಳ

ಕೂಡ್ಲಿಗಿ: ರಂಗ ಕಲಾವಿದರ ಶ್ರೇಯೋಭಿವೃದ್ಧಿಗೆ ನಾಟಕ ಅಕಾಡೆಮಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ರಂಗ ಸಂವಾದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಲಾವಿದರ ಮಾಸಾಶನವನ್ನು ಮೂರು ಸಾವಿರ ರೂ.ಗೆ ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದು, ಅವರು 2500 ರೂ.ಗೆ ಹೆಚ್ಚಿಸಿದ್ದಾರೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆ ಕಲಾವಿದರ ತವರೂರು ಅಗಿರುವುದರಿಂದ ಅಕಾಡೆಮಿಯ ಬಹುಪಾಲು ಪ್ರಶಸ್ತಿಗಳನ್ನು ಇಲ್ಲಿಯ ಕಲಾವಿದರಿಗೆ ನೀಡಲಾಗಿದೆ. ಎಂ.ಪಿ.ಪ್ರಕಾಶ್ ಗರಡಿಯಲ್ಲಿ ಪಳಗಿದ ನಾನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನಿಮ್ಮ ಪ್ರೋತ್ಸಹದಿಂದ ಜಿಲ್ಲೆಯ ಕಲಾವಿದರಲ್ಲಿ ಒಬ್ಬನಾಗಿ ಬೆಳೆದಿದ್ದೇನೆ. ಪಟ್ಟಣದಲ್ಲಿ ನಡೆಯುವ ಊರಮ್ಮ ದೇವಿ ಜಾತ್ರೆಯಲ್ಲಿ ಪ್ರದರ್ಶನ ನೀಡಲು ಎರಡು ನಾಟಕಗಳಿಗೆ ಪ್ರಾಯೋಜಕತ್ವ ನೀಡಲಾಗಿದೆ ಎಂದು ನಾಗರಾಜಮೂರ್ತಿ ತಿಳಿಸಿದರು.

ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಬ್ಯಾಳಿ ವಿಜಯಕುಮಾರ್ ಗೌಡ, ರಂಗ ಶಿಕ್ಷಕ ಶಿವನಾಯಕ ದೊರೆ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಕಲಾಭಾರತಿ ಸಂಘದ ಅಧ್ಯಕ್ಷ ಬಣಕಾರ ಮೂಗಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ವೀರೇಶ್, ಹಿರಿಯ ರಂಗಕಲಾವಿದರಾದ ಪಿ.ಪದ್ಮಾ, ಭಾರತಿ, ಅಂಜಿನಮ್ಮ, ಬ್ಯಾಳಿ ಶಿವಪ್ರಸಾದ ಗೌಡ, ವಿಭೂತಿ ವೀರಣ್ಣ, ಬಾಣದ ನರಸಿಂಹಪ್ಪ ಇದ್ದರು.