ಜಿಲ್ಲೆ

ಕಲಾವಿದ ಸಿದ್ದಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಪಟ್ಟನಾಯಕನಹಳ್ಳಿ: ನಮ್ಮ ನಾಡಿನ ಸಾಂಸತಿಕ ಪರಂಪರೆಯ ಜಾನಪದ ಕಲೆಯ ಜೋಗಿ ಪದಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮನೆಯ ಮುಂದೆ ಹಾಡುವ ಮೂಲಕ ಈ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ (ಹಂದಿ ಜೋಗಿ ಕಾಲನಿ) ಗ್ರಾಮದ ಕಿನ್ನರಿ ಕಲಾವಿದ ಸಿದ್ದಪ್ಪ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಾವರೆಕೆರೆ ಗ್ರಾಮದ ಸ್ವಲ್ಪ ದೂರದಲ್ಲಿರುವ ಹಂದಿ ಜೋಗಿಗಳ ಕುಟೀರಗಳಲ್ಲಿ ವಾಸ ಮಾಡುತ್ತಿರುವ ಜಾನಪದ ಕಲಾವಿದ ಸಿದ್ದಪ್ಪ. ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಹಾಡುಗಳ ಮೂಲಕ ಹಾಡುವ ಕಲೆಯನ್ನು ಈ ಕುಟುಂಬಗಳು ಐದು ದಶಕಗಳಿಂದ ಮಾಡುತ್ತಾ ಬಂದಿವೆ. ಇಂತಹ ಜಾನಪದ ಕಲೆ ಉಳಿಸಿ ಪ್ರೋತ್ಸಾಹಿಸಲು 2023-&24ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕ ಜಾನಪದ ಅಕಾಡೆಮಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿದ್ದಪ್ಪ ಅವರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿಯು 25 ಸಾವಿರ ರೂ.ಗಳನ್ನು ಒಳಗೊಂಡಿದೆ. ಇಂತಹ ಕಲಾವಿದರನ್ನು ಗುರುತಿಸಿ ಪುರಸ್ಕಾರ ನೀಡಿದ ಶಾಸಕ ಟಿ.ಬಿ. ಜಯಚಂದ್ರ ಅವರು ಹಾಗೂ ಶಿರಾ ಬ್ಲಾಕ್​ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಕರ್ನಾಟಕ ಜಾನಪದ ಅಕಾಡೆಮಿ

ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್​ ಅವರಿಗೆ ಕಲಾಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ.