ಮೈಸೂರು: ನಗರದ ಕಲಾಮಂದಿರದಲ್ಲಿ ಸುಗಮ ಸಂಗೀತ ಕಂಪು ಎಲ್ಲೆಡೆ ಪಸರಿಸಿತ್ತು. ರಾಗಲಹರಿಯಲ್ಲಿ ಕಲಾರಸಿಕರು ಮಿಂದೆದ್ದು ಸಂಭ್ರಮಿಸಿದರು. ಇದರೊಂದಿಗೆ ‘ಗೀತೋತ್ಸವ-2025’ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೂ ಭಾನುವಾರ ಸಂಜೆ ತೆರೆಬಿದ್ದಿತು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಹಯೋಗದಲ್ಲಿ ಎರಡು ದಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಗಾಯಕರು ತಮ್ಮ ಕಂಠಸಿರಿಯ ಮೂಲಕ ನೆರೆದವರ ಮನರಂಜಿಸಿ ಮನಗೆದ್ದರು.
ಸುಗಮ ಸಂಗೀತಕ್ಕಾಗಿ ಸಾಹಿತ್ಯವಿಲ್ಲ. ಸಾಹಿತ್ಯಕ್ಕಾಗಿ ಸಂಗೀತ ಎಂಬುದು ಇಲ್ಲಿ ಮತ್ತೊಮ್ಮೆ ರುಜುವಾತಾಯಿತು. ಕವಿತಾ ಸಂಗೀತ ಸ್ವರಗಳ ಬಣ್ಣದಲ್ಲಿ ಕಾವ್ಯದ ಚಿತ್ರವನ್ನು ಯಥಾವತ್ತಾಗಿ, ಸುಂದರವಾಗಿ, ಅರ್ಥಪೂರ್ಣವಾಗಿ ಮಂಡಿಸಲಾಯಿತು. ಇದರೊಂದಿಗೆ ಸಾಹಿತ್ಯದ ಎದೆಮಿಡಿತವನ್ನು ಗಾಯನದಲ್ಲಿ ಹಿಡಿದು ತೋರಿಸಲಾಯಿತು.
ಮೊದಲಿಗೆ, ನವ್ಯ-ನವೋದಯ ಕವಿಗೀತೆಗಳು, ನವ ಅನ್ವೇಷಣೆ, ರಾಗಾಧಾರಿತ ಸುಗಮ ಶಾಸ್ತ್ರೀಯ ಗಾಯನ, ಗೀತ ನೃತ್ಯ, ಕವಿಯ ನೋಡಿ-ಕವಿತೆ ಕೇಳಿ, ಗೀತೆ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಕುಳಿತ ಜಾಗದಿಂದ ಮೇಲೇಳದಂತೆ ಮೋಡಿ ಮಾಡಿದವು. ಒಂದೊಂದು ಗೀತೆಗೂ ಕೇಳುಗರು ಚಪ್ಪಾಳೆ ತಟ್ಟೆ ಉತ್ತೇಜಿಸಿದರು.
ಕವಿ ಕಡಂಗೊಡ್ಲು ಶಂಕರ ಭಟ್ಟ ರಚನೆಂು ‘ನಾಳೆಂು ಚಿಂತೆ ಬಿಟ್ಟು ಬಿಡು, ಬದುಕಿನ ಗೊಡವೆ ಸುಟ್ಟು ಬಿಡು’ ಗೀತೆಂುನ್ನು ಶಶಿಕಲಾ ಸುನೀಲ್ ಸೊಗಸಾಗಿ ಹಾಡಿ ಮೆಚ್ಚುಗೆ ಗಳಿಸಿದರು.
ಆನಂದಕಂದ ರಚನೆಂು ‘ನಾ ಸಂತಿಗೆ ಹೋಗಿನ್ನಿ’ ಜಾನಪದ ಶೈಲಿ ಗೀತೆಯನ್ನು ಶ್ರುತಿ ಹಿಡಿದು ಹಾಡಿದ ಪಿ.ಶಿವಶಂಕರ ಗಾಯನಕ್ಕೆ ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತವಾಯಿತು. ಹಾಡು ಮುಗಿದ ನಂತರವೂ ಕೂತ ಕೆಲವರು ಈ ಗೀತೆಯನ್ನು ಗುನುಗಿದರು.
ಡಿ.ಎಸ್.ಕರ್ಕಿ ಅವರ ‘ತೂಗುವ ತೊಟ್ಟಿಲ್ಲ ತಾಯೇ ಮತ್ತೊಮ್ಮೆ ತೂಗು ನೀನೇ’ ಆಶಯ ಗೀತೆಯನ್ನು ಸುನೀತ ಶ್ರೀಪಾದ ರಾವ್ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ಕವಿ ತೀನಂಶ್ರೀ ರಚನೆಯ ‘ಮಿಕ್ಕವರಲಿ ನಗೆ ಕೂಡುತ ಬೆರೆವೆ’ ಗೀತೆಯನ್ನು ಹಾ.ಸು.ರವಿರಾಜ್ ಹಾಡಿದರು. ಗಾಯಕಿ ರೋಹಿಣಿ ಮೋಹನ್ ಅವರು ಕವಿ ಡಿವಿಜಿ ಅವರ ‘ಕೆಲವು ಕಗ್ಗಗಳನ್ನು’ ಹಾಡಿ ರಸದೌತಣ ಉಣಬಡಿಸಿದರು.
ಎಂ.ಗೋವಿಂದ ಪೈ ಅವರ ‘ತಾಯೇ ಬಾರಾ’ ಗೀತೆಯನ್ನು ದಿಶಾ ಜೈನ್ ಹಾಡಿದರು. ಬಿ.ಎಂ.ಶ್ರೀಕಂಠಯ್ಯ ಅವರ ‘ಕರುಣಾಳು ಬಾ ಬೆಳಕೆ’ ಗೀತೆಗೆ ಸುಧಾಕರ ಗೌಡ ಧ್ವನಿಯಾಗಿ ನೆರೆದಿದ್ದವರಲ್ಲಿ ಕನ್ನಡ ಕಂಪನ್ನು ಹರಿಸಿದರು.
ಡಾ.ವಿ.ಸೀತಾರಾಮಯ್ಯ ರಚನೆಯ ‘ಕಾದಿರುವಳು ಶಬರಿ’ ಗೀತೆಯನ್ನು ಹಾಡಿದ ಅರ್ಪಣ ನರೇಂದ್ರ ಗಾಯನ ಮೋಡಿ ಮಾಡಿತು. ಜತೆಗೆ, ಮನಕ್ಕೆ ಶಬರಿಯ ಕಾಯುವಿಕೆ ಪರಿಯನ್ನು ತಂದಿಟ್ಟರು. ಪಂಜೆ ಮಂಗೇಶರಾಯರ ‘ಮೂಡುವನು ರವಿ’ ಗೀತೆಗೆ ಜಯಶ್ರೀ ಶ್ರೀಧರ್ ಧ್ವನಿಯಾಗಿ ರಂಜಿಸಿದರು.
ಇದಾದ ಬಳಿಕ ನಡೆದ ರಾಗಾಧಾರಿತ ಗೀತೆ ಕಾರ್ಯಕ್ರಮದಲ್ಲಿ ಗಾಯಕಿ ಮೀರಾ ಮೋಹನ ಕಲ್ಯಾಣಿ ರಾಗದಲ್ಲಿ ಮೀರಾ ‘ನೀನು ಮುಗಿಲು’ ಗೀತೆ ಸಭಿಕರನ್ನು ಕಲ್ಪನಾ ಲೋಕದಲ್ಲಿ ಯಾನ ಮಾಡಿಸಿತು. ಗಾಯಕ ರವಿ ಕೃಷ್ಣಮೂರ್ತಿ ಚಾರುಕೇಶಿ ರಾಗದಲ್ಲಿ ‘ನನ್ನ ಕೈ ಹಿಡಿದಾಕೆ’ ಹಾಡು ಪತ್ನಿಯರ ಕಿರು ಬೆರಳನ್ನು ಹಿಡಿಯುವಂತೆ ಮಾಡಿತು.
ಸುಗಮ ಸಂಗೀತಕ್ಕೆ ಭೂಮಿಕೆ ಹಾಕಿಕೊಟ್ಟವರು ಪಂಪ ಎಂದು ಸಾಹಿತಿ ಪ್ರೊ.ಡಾ. ಹಂಪ ನಾಗರಾಜಯ್ಯ ಹೇಳಿದರು.
ಕನ್ನಡದ ಆದಿಕವಿಯಾಗಿರುವ ಪಂಪ ರಚಿಸಿರುವ ಆದಿಪುರಾಣ, ವಿಕ್ರಮಾರ್ಜುನ ವಿಜಯ ಮಹಾಕಾವ್ಯದಲ್ಲಿ ಸುಗಮ ಸಂಗೀತದ ಆಶಯಗಳಿವೆ ಎಂದರು.
ಸಂಗೀತ ಕೇಳುವುದರಿಂದ ಮುಪ್ಪು ಬರಲ್ಲ. ಜತೆಗೆ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಗೀತ ಕೇಳಿ ಆನಂದಿಸಬೇಕು ಎಂದರು.
ಮತ್ತೊಬ್ಬ ಸಾಹಿತಿ ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಮಾತನಾಡಿ, ಕವಿಗಳ ಕವಿತೆಯನ್ನು ಸಂಗೀತಾಸಕ್ತರಿಗೆ ತಲುಪಿಸುವ ಸುವರ್ಣ ಮಾಧ್ಯಮವೇ ಸುಗಮ ಸಂಗೀತ. ಇದು ಹೃದಯ ಅರಳಿಸಿ, ಮುದ ನೀಡುತ್ತದೆ. ಸಂಗೀತದ ವಿಶಿಷ್ಟ ಪ್ರಕಾರವಾಗಿರುವ ಇದರಲ್ಲಿ ಮಾಂತ್ರಿಕತೆಯೂ ಇದೆ ಎಂದರು.
ಸಮ್ಮೇಳನಾಧ್ಯಕ್ಷ ನಗರ ಶ್ರೀನಿವಾಸ ಉಡುಪ, ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಪದಾಧಿಕಾರಿಗಳಾದ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಬಿ.ವಿ.ಪ್ರವೀಣ್ ಇನ್ನಿತರರಿದ್ದರು.