ಮೈಸೂರು: ನಗರದ ಕಲಾಮಂದಿರದಲ್ಲಿ ಮಂಗಳವಾರ ಸಂಜೆ ತ್ರಿಪುರ ರಾಜ್ಯದ ಸಾಂಪ್ರದಾಯಿಕ ಸಾಂಸ್ಕೃತಿಕ ಸೊಗಡು ಅನಾವರಣಗೊಂಡಿತು.
ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಆಯೋಜಿಸಿದ್ದ ‘ಭಾರತೀಯ ಹಬ್ಬಗಳು’ ಸಾಂಸ್ಕೃತಿಕ ಉತ್ಸವ ತ್ರಿಪುರ ರಾಜ್ಯದ ಸಂಸ್ಕೃತಿಯ ಸಮಾಗಮಕ್ಕೆ ಸಾಕ್ಷಿಯಾಯಿತು.
ಹಚ್ಚ ಹಸಿರು ಕಣಿವೆಗಳು, ಬೆಟ್ಟಗುಡ್ಡಗಳಿಂದ ಕೂಡಿರುವ ಈ ರಾಜ್ಯದ ಹಬ್ಬಗಳ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು, ಹಾಡುಗಳು ಇಲ್ಲಿ ಮೇಳೈಸಿದವು.ಅಗರ್‌ತಲ ಕಲಾವಿದರು ಗುಡ್ಡಗಾಡು ಜನಾಂಗದ ನೃತ್ಯವನ್ನು ಸೊಗಸಾಗಿ ಪ್ರಸ್ತುತಪಡಿಸಿ ಸಭಿಕರ ಮನಗೆದ್ದರು.
ವಿಫುಲ್ ದೇವ್‌ವರ್ಮಾ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಹಾಡು, ನೃತ್ಯ ಗಮನ ಸೆಳೆದವು. ಮೈಸೂರು ಪ್ರಾಂತ್ಯದ ಸುಗ್ಗಿ ಕುಣಿತ, ಸುಗ್ಗಿ ಹಾಡುಗಳಂತೆ ಹೋಲುವ ಮಮಿತ್ ಸುಗ್ಗಿ ಉತ್ಸವ ಕಳೆಗಟ್ಟಿತ್ತು. ವರ್ಷವಿಡೀ ಬಿತ್ತಿ ಬೆಳೆದ ಕೃಷಿ ಫಸಲು ಕೈಗೆ ಬಂದಾಗ ರೈತರ ಸಂತಸವನ್ನು ಕಲಾವಿದರು ಅರ್ಥಪೂರ್ಣವಾಗಿ ಕಟ್ಟಿಕೊಟ್ಟರು. ಯುವಕ-ಯುವತಿಯರು ತಾಳಬದ್ಧ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಹಾಡಿನೊಂದಿಗೆ ಭೂತಾಯಿಯನ್ನು ಆರಾದಿಸಿದರು.
ಬಳಿಕ ಗಂಡ-ಹೆಂಡತಿ ಸಂಭಾಷಣೆಯನ್ನು ಹಾಡಿನಲ್ಲಿ ಕಟ್ಟಿಕೊಡಲಾಯಿತು. ಪತಿಗೆ ಪತ್ನಿ ಹೇಳುವ ಕಿವಿಮಾತು ಹೇಳುವುದನ್ನು ಬಿಂಬಿಸಿದ ಹಾಡು ಹಾಗೂ ನೃತ್ಯವನ್ನು ಯುವತಿಯರು ನವಿರಾಗಿ ಪ್ರದರ್ಶಿಸಿದರು. ಲೆಬಂಗ್ ಬೋಮನಿ, ಹೋಜಾಗಿರಿ ನೃತ್ಯ ಸಹ ವಿಭಿನ್ನವಾಗಿತ್ತು. ಪಂಚಾಲಿ ಡೆಬ್ ವರ್ಮಾ ನಿರ್ದೇಶನದಲ್ಲಿ ಇಡೀ ಕಾರ್ಯಕ್ರಮ ಮೂಡಿಬಂತು.