ಬೇಲೂರು: ಮಂಗಳೂರಿನ ಯುವ ವಕೀಲರೊಬ್ಬರ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಹಲ್ಲೆ ನಡೆಸಿ, ಜೀವ ಬೇದರಿಕೆ ಹಾಕಿರುವುದನ್ನು ಖಂಡಿಸಿ ಬೇಲೂರು ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಬುಧವಾರ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ವಕೀಲ ಕುಲ್‌ದೀಪ್‌ಶೆಟ್ಟಿ ಮೇಲೆ ಬಂಟ್ವಾಳದ ಪುಂಜಲಕಟ್ಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಡೆಸಿದ ದೌರ್ಜನ್ಯ ಖಂಡನೀಯ. ಯಾರೊಬ್ಬರ ಮೇಲೆ ಪ್ರಕರಣ ದಾಖಲಿಸಿದಾಗ ನೋಟಿಸ್ ನೀಡದೆ ಬಂಧಿಸುವಂತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ಮಾಡದೆ ಏಕಾಏಕಿ ಗೂಂಡಾ ರೀತಿ ವರ್ತನೆ ಮಾಡಿ, ದೌರ್ಜನ್ಯ ಎಸಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಿರಿಯ ವಕೀಲರಾದ ಎಸ್.ಎನ್,ಲಿಂಗೇಶ್, ವಕೀಲರ ಸಂಘದ ಉಪಾಧ್ಯಕ್ಷ ರವಿ, ಖಜಾಂಚಿ ಶ್ರೀನಿಧಿ, ಕಾರ್ಯದರ್ಶಿ ಜಿ.ಟಿ.ಪ್ರಕಾಶ್, ವಕೀಲರಾದ ರಾಜಶೇಖರ್, ರತೀಶ್, ಚಂದ್ರೇಗೌಡ, ಸೊಮೇಗೌಡ, ಸಿ.ಪೃಥ್ವಿ, ನಟರಾಜ್ ಚಂದ್ರು, ಕುಮಾರ್, ಅರುಣ್, ಸ್ವಾಮಿ, ಪಂಚಾಕ್ಷರಿ ಇದ್ದರು.