ಧಾರವಾಡ: ವಕೀಲರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಗ್ರಾಮೀಣ ಠಾಣೆಯ ಪೊಲೀಸರನ್ನು ಬಂಧಿಸಲು ಆಗ್ರಹಿಸಿ ಧಾರವಾಡ ವಕೀಲರ ಸಂಘದ ಸದಸ್ಯರು ಇಲ್ಲಿನ ಉಪನಗರ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದವರು ಸಭೆ ಸೇರಿ, ಆರೋಪಿತ ಪೊಲೀಸರನ್ನು ಬಂಧಿಸುವವರೆಗೆ ಹೋರಾಟ ನಡೆಸಲು ತೀರ್ವನಿಸಿ ಕಲಾಪದಿಂದ ದೂರ ಉಳಿದರು. ನ್ಯಾಯಾಲಯದಿಂದ ಉಪನಗರ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಪಕ್ಷಗಾರರ ಪರವಾಗಿ ವಿಚಾರಿಸಲು ಠಾಣೆಗೆ ಹೋಗಿದ್ದ ವಕೀಲ ಸುನೀಲ ಗುಡಿ ಅವರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೇದೆಗಳಾದ ಗಣೇಶ ಕಾಂಬಳೆ, ದೇವರಾಜ, ಪಿಎಸ್ಐ ಮಹೇಂದ್ರಕುಮಾರ ನಾಯಕ, ಸಿಪಿಐ ಸಿದ್ದನಗೌಡ ಪಾಟೀಲ ಅವರನ್ನು ಮಾ. 12ರ ಮಧ್ಯಾಹ್ನ 12ರೊಳಗೆ ಬಂಧಿಸಬೇಕು ಎಂದು ಎಚ್ಚರಿಕೆ ನೀಡಿದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಘೊಡ್ಸೆ, ಉಪಾಧ್ಯಕ್ಷ ರಾಜು ಕೋಟಿ, ಕಾರ್ಯದರ್ಶಿ ಎನ್.ಆರ್. ಮಟ್ಟಿ, ಸದಸ್ಯರಾದ ರಾಜು ಅವಲಕ್ಕಿ, ಪ್ರಕಾಶ ಉಡಿಕೇರಿ, ಕೆ.ಎಚ್. ಪಾಟೀಲ, ರೂಪಾ ಕೆಂಗಾನೂರ, ಅಶೋಕ ದೊಡ್ಡಮನಿ, ಕರಿಯಪ್ಪ ಅಮ್ಮಿನಭಾವಿ, ಆನಂದಗೌಡ ಬಾಡಿಯವರ, ಕೃಷ್ಣ ಪವಾರ, ರಾಹುಲ ಅರವೇಡ, ಸಂತೋಷ ಭಾವಿಹಾಳ, ವೀಣಾ ನಾಗಮ್ಮನವರ, ಜ್ಯೋತಿ ಪೂಜಾರ, ಸಂತೋಷ ಕಮತರ, ರೇಣುಕಾ ಪಾಟೀಲ, ಸುನೀಲ ಗುಡಿ, ವೀಣಾ ಗೌರಪ್ಪನವರ, ಇತರರು ಪ್ರತಿಭಟನೆಯಲ್ಲಿದ್ದರು.
ಹುಬ್ಬಳ್ಳಿಯಲ್ಲಿ: ಧಾರವಾಡದಲ್ಲಿ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಂಧನಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಸಹ ವಕೀಲರ ಸಂಘದವರು ಪ್ರತಿಭಟನೆ ನಡೆಸಿ, ಅಪರ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿಪತ್ರ ರವಾನಿಸಿದರು. ಅಧ್ಯಕ್ಷ ಅಶೋಕ ಬಳಿಗಾರ, ಕಾರ್ಯದರ್ಶಿ ಗುರು ಹಿರೇಮಠ, ಸಂಜು ಬಡಸ್ಕರ, ಇತರರು ಇದ್ದರು.
ವಕೀಲ ವಿರುದ್ಧ ಮೊಕದ್ದಮೆಗೆ ಆಗ್ರಹ: ಮತ್ತೊಂದೆಡೆ ಸರ್ಕಾರಿ ವಕೀಲ ಸುನೀಲ ಗುಡಿ ವಿರುದ್ಧ ಅಮ್ಮಿನಭಾವಿ ಗ್ರಾಮದ ದಲಿತ ಮುಖಂಡರು ಹಾಗೂ ಕೆಲ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸುನೀಲ ಗುಡಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಜಿಲ್ಲೆಯ ಸರ್ಕಾರಿ ವಕೀಲ ಎಂದು ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದಾರೆ. ಅವರು ಸರ್ಕಾರಿ ವಕೀಲ ಎಂಬುದನ್ನು ಮರೆತು ತಾಲೂಕಿನ ಅಮ್ಮಿನಭಾವಿ ಹಾಗೂ ಸುತ್ತಲಿನ ಗ್ರಾಮಗಳ ಸಿವಿಲ್ ವ್ಯಾಜ್ಯಗಳಲ್ಲಿ ವಿನಾಕಾರಣ ಮಧ್ಯಪ್ರವೇಶಿಸುತ್ತಿದ್ದಾರೆ. ತಮ್ಮದೇ ಸರ್ಕಾರವಿದ್ದು, ಅಧಿಕಾರಿಗಳು ಹೇಳಿದಂತೆ ಕೇಳುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅಧಿಕಾರಿಗಳ ಮೇಲೆ ದರ್ಪವನ್ನೂ ಮೆರೆಯುತ್ತಿದ್ದಾರೆ. ಅಲ್ಲದೆ, ವಕೀಲರ ಸಂಘಕ್ಕೂ ಸುಳ್ಳು ಮಾಹಿತಿ ನೀಡಿ ಕಲಾಪ ಸ್ಥಗಿತಗೊಳಿಸಿ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿದ್ದಾರೆ. ಅವರನ್ನು ಸರ್ಕಾರಿ ವಕೀಲ ಹುದ್ದೆಯಿಂದ ಕೆಳಗಿಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನೇಮಕಾತಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಲಕ್ಷ್ಮಣ ದೊಡ್ಡಮನಿ, ಚಂದ್ರು ಹುಲೆನ್ನವರ, ಮಂಜುನಾಥ ಹೊಸಮನಿ, ಅಶೋಕ ದೊಡ್ಡಮನಿ, ಪುಂಡಲೀಕ ವೈ.ಎಚ್., ಕೃಷ್ಣ ಮಾದರ, ರಾಜು ನಾವಳ್ಳಿ, ಸುನೀಲ ಹರಿಜನ, ಸುರೇಶ ದೊಡ್ಡಮನಿ, ಬಸವರಾಜ ಮಾದರ, ಇತರರಿದ್ದರು.