ಚನ್ನರಾಯಪಟ್ಟಣ: ಸಂಸ್ಕೃತಿ ಉಳಿವಿಗೆ ಕಲಾತ್ಮಕ ಚಟುವಟಿಕೆಗಳನ್ನು ಬೆಂಬಲಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರ, ನಾಡಪ್ರಭು ಕೆಂಪೇಗೌಡ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಸಪ್ತಸಾಗರ ಕಲಾನಿಕೇತನ ಮತ್ತು ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ಸಹಯೋಗದಲ್ಲಿ ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭರತನಾಟ್ಯಕ್ಕೆ ಇರುವ ಗೌರವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಬೆಳೆಸಬೇಕು, ಕಲಾರಂಗಕ್ಕೆ ಹೆಚ್ಚು ಪ್ರೋತ್ಸಾಹಿಸುವ ತಾಲೂಕು ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮೂರು ವಿಭಾಗಗಳಲ್ಲಿ ನಡೆದ ಭರತನಾಟ್ಯ ಸ್ಪರ್ಧೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸ್ಪರ್ಧಾಗಳುಗಳು ಸೋಲು- ಗೆಲುವನ್ನು ಪಕ್ಕಕ್ಕೆ ಇಟ್ಟು ಉತ್ಸಾಹಶೀಲರಾಗಿರಬೇಕು ಎಂದರು.
ಕತ್ತರಿಘಟ್ಟ ಮೆಳಿಯಮ್ಮ ಅಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ, ಪಾರಿತೋಷಕ ವಿತರಣೆ ಮಾಡಿ ಆಶೀರ್ವಚನ ನೀಡಿ, ಪಾಲಕರು ಮಕ್ಕಳಿಗೆ ನಮ್ಮ ನೆಲದ ಕಲೆ, ಸಂಸ್ಕೃತಿಯನ್ನು ಕಲಿಸಬೇಕು. ಮೊಬೈಲ್ ಫೋನ್ ಕೊಟ್ಟು ಮಾನಸಿಕವಾಗಿ ಮಕ್ಕಳನ್ನು ಕುಬ್ಜರಾಗಿಸಬೇಡಿ ಎಂದರು. ಪರಿಸರ ಪ್ರೇಮಿ ಚ.ನಾ.ಅಶೋಕ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿದರು.
ವಿಜೇತರು :
18 ವರ್ಷದೊಳಗಿನ ಏಕವ್ಯಕ್ತಿ ಪ್ರದರ್ಶನದಲ್ಲಿ ಉಡುಪಿಯ ಬಿ. ಶ್ರೀಲಕ್ಷ್ಮೀ (ಪ್ರ), ಉಡುಪಿಯ ಪರಿಣಿತಾ (ದ್ವಿ) ಬಹುಮಾನ ಪಡೆದರು. 18ವರ್ಷ ಮೇಲ್ಪಟ್ಟ ಏಕವ್ಯಕ್ತಿ ಪ್ರದರ್ಶನದಲ್ಲಿ ಮೈಸೂರಿನ ಪವನ್‌ಕುಮಾರ್ (ಪ್ರ) ಹಾಸನದ ವೈಷ್ಣವಿ (ದ್ವಿ), ಸಮೂಹ ಭರತನಾಟ್ಯ ಸ್ಪರ್ಧೆಯಲ್ಲಿ ಉಡುಪಿಯ ಸಾವಿತ್ರಿ ನೃತ್ಯ ಶಾಲೆ (ಪ್ರ), ಚನ್ನರಾಯಪಟ್ಟಣದ ಉಗ್ರತಾಂಡವ ತಂಡ (ದ್ವಿ) ಸ್ಥಾನ ಮತ್ತು ಪಾರಿತೋಷಕ ಪಡೆದರು.