ಹಾಸನ: ನಗರದ ಸಿಟಿ ಬಸ್ ನಿಲ್ದಾಣ ರಸ್ತೆಯ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ 68ನೇ ವರ್ಷದ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಶನಿವಾರ ವಿವಿಧ ಕಲಾತಂಡಗಳೊಂದಿಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಕರೆದೊಯ್ದು ನಗರದ ದೇವಿಕೆರೆ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.
ಶನಿವಾರ ಬೆಳಿಗ್ಗೆ 10:30ಕ್ಕೆ ಪೆಂಡಾಲ್‌ನಿಂದ ಉತ್ಸವ ದಸರಾ ರೀತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ಮೆರವಣಿಗೆ ಪ್ರಾರಂಭವಾಯಿತು. ಗುಲಾಬಿ, ಸೇವಂತಿಗೆ, ಜರ್ಬರ ಮತ್ತಿತತ ಬಣ್ಣಬಣ್ಣಗಳ ಹೂಗಳಿಂದ ಅಲಂಕೃತಗೊಂಡ ವೈಭವಪೂರ್ಣ ವಾಹನದಲ್ಲಿ ಮೂರ್ತಿಗಳನ್ನು ಇರಿಸಲಾಗಿತ್ತು. ಶಾಸಕ ಪ್ರೀತಂ ಜೆ. ಗೌಡ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್, ಜಿಲ್ಲಾ ಪಂಚಾಯತಿ ಸಿಇಒ ಕಾಂತರಾಜು, ನಗರಸಭೆ ಆಯುಕ್ತ ಪರಮೇಶ್ವರಪ್ಪ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಲಾಟಮೂರ್ತಿ ಮತ್ತು ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ. ಎಚ್. ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಅವರು ಡೋಲು ಬಾರಿಸುವ ಮೂಲಕ ಮರವಣಿಗೆಗೆ ಚಾಲನೆ ನೀಡಿದರು.
ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 30 ಕ್ಕೂ ಹೆಚ್ಚಿನ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ವಿಸರ್ಜನಾ ಮಹೋತ್ಸವದ ಮೆರುಗು ಹೆಚ್ಚಿಸಿದವರು. ನಾದಸ್ವರ , ಪೂಜಾ ಕುಣಿತ, ಡೊಳ್ಳು ಕುಣಿತ, ಚಂಡೇಮೇಳ, ನಗಾರಿ, ಕೊಂಬು ಕಹಳೆ ಹಾಗೂ ವಾದ್ಯ ಮೇಳ, ನಂದಿಧ್ವಜ, ಚಿಟ್ಟಿಮೇಳ, ಮಹಿಳೆಯರ ವೀರಗಾಸೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕರಗ, ಯಕ್ಷಗಾನ, ಸುಗ್ಗಿ ಕುಣಿತ, ಹುಲಿವೇಷ, ಸೋಮನ ಕುಣಿತ, ರಂಗ ಕುಣಿತ, ಕಂಸಾಳೆ, ಪುರುಷರ ವೀರಗಾಸೆ, ಪಟ್ಟದ ಕುಣಿತ, ಕೋಲಾಟ, ಜಗ್ಗಹಲಗೆ, ನಾಸಿಕ್ ಡೋಲು, ಕೀಲುಕುದುರೆ, ಕೊಡವ ನೃತ್ಯ ಮೆರವಣಿಗೆ ಉದ್ದಕ್ಕೂ ಇಕ್ಕೆಲೆಗಳಲ್ಲಿ ಸೇರಿದ್ದ ಜನರ ಮನರಂಜಿಸಿದವು.
ಮಂಗಳೂರು ಗುರುವಾಯನಕೆರೆಯ ಸೃಷ್ಟಿ ಆರ್ಟ್ಸ್ ತಂಡದ ಯಕ್ಷಗಾನ ಹಾಗೂ ಹುಲಿ ಕುಣಿತ ಜನಮನ ಸೂರೆಗೊಂಡಿತು. ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮೆರವಣಿಗೆಯು ನಗರದ ಮಧ್ಯಭಾಗದಲ್ಲಿರುವ ಪಿಕ್ಚರ್ ಪ್ಯಾಲೆಸ್ ರಸ್ತೆಯಿಂದ ಸುಬಾಷ್ ಚೌಕ, ಗಾಂಧಿ ಬಜಾರ್, ಕನ್ನಿಕಾ ಪರಮೇಶ್ವರಿ ದೇವಾಲಯ ರಸ್ತೆ , ಹಾಸನಾಂಬ ವೃತ್ತ , ಚೌಡೇಶ್ವರಿ ದೇವಾಲಯ ರಸ್ತೆ, ನಗರಸಭೆ ರಸ್ತೆ, ವಲ್ಲಬಾಯಿ ರಸ್ತೆ , ಮಟನ್ ಮಾರ್ಕೆಟ್ ರಸ್ತೆ , ಹೊಸಲೈನ್ ರಸ್ತೆ , ಬಸವೇಶ್ವರ ವೃತ್ತ , ಅರಳೇಪೇಟೆ, ಸಹ್ಯಾದ್ರಿ ಸರ್ಕಲ್, ಬಸಟ್ಟಿಕೊಪ್ಪಲು, ಸಂಪಿಗೆ ರಸ್ತೆ, ಮಂಗಳ ಆಸ್ಪತ್ರೆ, ಬಿ.ಎಂ. ರಸ್ತೆ, ಎನ್.ಆರ್. ವೃತ್ತ ಹಾಗೂ ಸುಬಾಷ್ ಚೌಕದ ಮೂಲಕ ಹಾದು ದೇವಿಕೆರೆ ತಲುಪುವ ವೇಳೆಗೆ ರಾತ್ರಿ ಆಯಿತು. ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಸಿ, ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎಚ್.ನಾಗರಾಜ್, ಧರ್ಮದರ್ಶಿಗಳಾದ ಭೂದೇಶ್, ಎಚ್.ಎಸ್ ಅನಂತನಾರಾಯಣ, ಕೆ ಪಿ ಎಸ್ ಪ್ರಮೋದ್, ಎನ್.ಎಸ್. ಶಂಕರ್‌ರಾವ್, ಸಿ ರಾಮಚಂದ್ರಯ್ಯ, ಎಚ್.ಎಂ ಸುರೇಶ್ ಕುಮಾರ್, ಎಚ್.ಪಿ ಕಿರಣ್, ಎಂ.ಕೆ ಕಮಲ್ ಕುಮಾರ್, ಪಿ.ಆರ್ ನಾಗೇಂದ್ರ, ಹೆಚ್.ಡಿ ದೀಪಕ್, ಎನ್.ಲೀಲಾಕುಮಾರ್ ಇತರರು ಇದ್ದರು.
ಮೆರವಣಿಗೆ ಉದ್ದಕ್ಕೂ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗಾರಿ ಹಾಗೂ ಡೋಲಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮುಖ್ಯ ಬೀದಿಗಳಲ್ಲಿ ಭಕ್ತರಿಂದ ದೇವರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಅಲ್ಲದೆ ಮೆರವಣಿಗಿದ ದಾರಿಯಲ್ಲಿ ಅಲ್ಲಲ್ಲಿ ವಿವಿಧ ಸಂಘಸಂಸ್ಥೆಗಳು ಸಾರ್ವಜನಿಕರು ಮತ್ತು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದವು.
ಸೆ.27 ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ಗಣಪತಿ ಪೆಂಡಾಲಿನಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.