ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ಕಲಾ ಸಂಸ್ಥೆಗಳು ಗುರುವಾರ ವಿಶ್ವ ರಂಗಭೂಮಿ ದಿನವನ್ನು ಆಚರಣೆ ಮಾಡಿದವು.
ಜಿಲ್ಲಾಕೇಂದ್ರವಾಗಿರುವ ಚಾಮರಾಜನಗರ ರಂಗ ಚಟುವಟಿಕೆಗಳ ಪ್ರಧಾನ ಕೇಂದ್ರವೂ ಆಗಿದೆ. ಇಲ್ಲಿ ಗುರುವಾರ ರಂಗ ಸಂಸ್ಥೆಗಳ ಸಂಭ್ರಮ ಮನೆ ಮಾಡಿತ್ತು. ರಂಗ ಗೀತೆಗಳ ಗಾಯನ, ರಂಗಭೂಮಿಯ ಮಹತ್ವ ಸಾರುವ ಕಾರ್ಯಕ್ರಮ, ರಂಗಕರ್ಮಿಗಳಿಗೆ ಗೌರವ ಸನ್ಮಾನ, ನಾಟಕಗಳ ಪ್ರದರ್ಶನ ನಡೆದು ವಿಶ್ವ ರಂಗಭೂಮಿ ದಿನಾಚರಣೆಗೆ ಅರ್ಥ ತಂದುಕೊಟ್ಟಿತು.
ರಂಗಭೂಮಿ ಉಳಿಯಲಿ: ಗ್ರಾಮೀಣ ರಂಗಭೂಮಿ ಮೂಲ ಮತ್ತು ಸತ್ವಶಾಲಿ ರಂಗಭೂಮಿಯಾಗಿದ್ದು, ಹವ್ಯಾಸಿ ಮತ್ತು ನಾಟಕ ಕಂಪನಿಗಳ ಹುಟ್ಟಿಗೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಪಾತ್ರವಾಗಿ ಪ್ರೇಕ್ಷಕರಿಗೆ ಕಾಣಿಸಿಕೊಳ್ಳುವ ರೀತಿಯೆ ಅನುಭವಜನ್ಯ ಕೌಶಲ್ಯ. ರಂಗಭೂಮಿ ಎಂದಿಗೂ ಅಳಿಯದಿರಲಿ ಉಳಿಯಲಿ ಎಂದು ಸಾಹಿತಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ(ಮಂಜು ಕೋಡಿಉಗನೆ) ತಿಳಿಸಿದರು.
ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಂಗತರಂಗ ಟ್ರಸ್ಟ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರೀಕ್ ರಂಗಭೂಮಿ ಪ್ರಾಚೀನ ರಂಗಭೂಮಿಯಾಗಿದ್ದು, ನಂತರ ಇತರೆ ದೇಶಗಳಿಗೆ ವ್ಯಾಪಿಸಿಕೊಂಡಿತು. ಕಿಟ್ಟೆಲ್, ಮಿಲ್ಲರ್, ರೈಸ್ ಮುಂತಾದ ಹೊರದೇಶದ ತಜ್ಞರಿಂದಲೇ ಕನ್ನಡ ಭಾಷೆ, ಸಂಸ್ಕೃತಿ ವಿಸ್ತರಿಸಿತು ಎಂದರೆ ತಪ್ಪಾಗಲಾರದು. ಒಂದೊಂದು ಗ್ರಾಮೀಣ ರಂಗ ತಂಡಗಳು ಒಂದೊಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿವೆ. ರಂಗತರಂಗ ಕಲಾವಿದರು ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಿ ಡ್ರಾಮಾ ಮಾಸ್ಟರ್ ಶಿವಶಂಕರ್ ಹೆಗ್ಗವಾಡಿ ಮತ್ತು ರಂಗನಟ ಮಾದನಾಯ್ಕ ಇವರಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಾಂಶುಪಾಲ ಪ್ರೊ.ಥಿಯೋಡರ್ ಲೂಥರ್ ಮಾತನಾಡಿ, ರಂಗಭೂಮಿ ಎಂದರೆ ಪರಸ್ಪರ ಪ್ರೀತಿ ಮತ್ತು ಗೌರವಗಳಿಂದ ಸಮಾಜ ಮತ್ತು ಮನಸ್ಸುಗಳನ್ನು ಕಟ್ಟುವ ಕೆಲಸವೇ ಆಗಿದೆ. ಇಲ್ಲಿ ದ್ವೇಷ, ಅಸೂಯೆಗೆ ಜಾಗವಿಲ್ಲ. ಅಂಕು ಡೊಂಕುಗಳನ್ನು ತಿದ್ದುವ ತಿದ್ದಿಕೊಳ್ಳುವ ಕ್ರಿಯೆ ಮಾತ್ರ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಎಸ್.ಜಿ ಮಹಾಲಿಂಗಸ್ವಾಮಿ ವಿಶ್ವ ರಂಗಭೂಮಿ ಸಂದೇಶವನ್ನು ವಾಚನ ಮಾಡಿದರು. ಡ್ರಾಮಾ ಮಾಸ್ಟರ್ ಹೆಗ್ಗವಾಡಿ ಶಿವಶಂಕರ್ ಮತ್ತು ರಂಗ ಕಲಾವಿದ ಮಾದನಾಯ್ಕ ಅವರನ್ನು ಫಲ ತಾಂಬೂಲ, ಸನ್ಮಾನ ಫಲಕ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕಲಾವಿದ ಅಂಬಳೆ ಸಿದ್ದರಾಜು, ಚಾ.ನಗರ ವಿವಿ ಪ್ರಾಧ್ಯಾಪಕ ಬಸವಣ್ಣ ಮೂಕಳ್ಳಿ, ಮನೋಜ್ , ದಾಕ್ಷಾಯಿಣಿ, ಉಪಸ್ಥಿತರಿದ್ದರು.