ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿತೆಯ ಭರಾಟೆಯಲ್ಲಿ ತೆರೆಮರೆಗೆ ಸರಿಯುತ್ತಿರುವ ಪ್ರಾಚೀನ ತೊಗಲು ಬೊಂಬೆಯಾಟದಂತಹ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹಿರಿಯ ಚಿತ್ರಕಲಾವಿದೆ ಗಾಯತ್ರಿ ದೇಸಾಯಿ ಹೇಳಿದರು.
ನಗರದ ರಂಗಾಯಣ ಆವರಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಗರದ ಗೊಂಬೆಮನೆ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ಬೊಂಬೆಗಳ ಪ್ರದರ್ಶನ, ಆಟ ಮತ್ತು ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ತೊಗಲು ಬೊಂಬೆಯಾಟ ಭಾರತೀಯ ಪರಂಪರೆಯ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಹಲವು ಕಲಾ ಪ್ರಕಾರಗಳ ಸಂಯೋಜನೆ ಒಳಗೊಂಡಿದೆ. ಚಿತ್ರಕಲೆ, ಭಾಷೆ, ಸಂಗೀತ ಇವುಗಳನ್ನು ಒಳಗೊಂಡ ಬೊಂಬೆಯಾಟ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಅದನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಯನ್ನು ಈ ಕಲಾ ಪ್ರಕಾರದಲ್ಲಿ ತೊಡಗಿಸುವ ಅಗತ್ಯವಿದೆ ಎಂದರು.
ಚಿತ್ರಗಳಿಗೂ ಭಾಷೆ ಇದೆ. ತೊಗಲು ಬೊಂಬೆಯಾಟದಲ್ಲಿ ಬಳಕೆಯಾಗುವ ಬೊಂಬೆಗಳ ಚಿತ್ರಣದಲ್ಲಿ ಮರಾಠಿಯ ಚಿತ್ರಕಥಾ ಪರಂಪರೆ ಮತ್ತು ಜೈನ ಕುಸುರಿ ಕಲೆಯ ಪ್ರಭಾವ ಕಂಡುಬರುತ್ತದೆ. ಹೀಗೆ ಬೇರೆ, ಬೇರೆ ಪ್ರಭಾವಗಳಿಂದ ಕಥೆಯೊಂದನ್ನು ಬೊಂಬೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಪರಿಣಾಮಕಾರಿ ಕಲಾ ಪ್ರಕಾರ ಇದಾಗಿದೆ ಎಂದರು.
ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಮಾತನಾಡಿ, ತೊಗಲುಬೊಂಬೆಯಾಟದಂತಹ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳಿಗೆ ಮನರಂಜನೆ ಮೂಲಕ ಜ್ಞಾನ ನೀಡಬಹುದು. ಆ ನಿಟ್ಟಿನಲ್ಲಿ ಸಮಕಾಲೀನ ಸಂಗತಿಗಳನ್ನು ಆಟಕ್ಕೆ ಒಗ್ಗಿಸಿ, ಪ್ರದರ್ಶಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಅದಕ್ಕೆ ರಂಗಾಯಣ ಸಹಕಾರ ನೀಡಲಿದೆ ಎಂದರು.
ಇದಕ್ಕೂ ಮುನ್ನ 3 ದಿನಗಳ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳು ಸಿದ್ಧಪಡಿಸಿದ, ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಯುವ ಕಲಾವಿದೆ ಐಶ್ವರ್ಯ ತಾಂಬೆ ನಿರ್ದೇಶನದಲ್ಲಿ ಮುನ್ನು ಮೊಸಳೆ ಮುಂಬೈಗೆ ಹೋಯ್ತು ನೆರಳು ಬೊಂಬೆಯಾಟ ಮತ್ತು ಸೋಮು ಕಾರಿಗನೂರು ನಿರ್ದೇಶನದಲ್ಲಿ ಗಂಟೆ ಗಲಾಟೆ ಬಿದಿರು ಬೊಂಬೆಯಾಟ ಪ್ರದರ್ಶನಗೊಂಡವು.
ಶಿಬಿರದ ನಿರ್ದೇಶಕಿ ರಜನಿ ಗರುಡ, ಡಾ.ಪ್ರಕಾಶ ಗರುಡ, ಡಾ.ಶ್ಯಾಮಸುಂದರ ಬಿದರಕುಂದಿ, ಮಧು ದೇಸಾಯಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.