ಕಲಬುರಗಿ: ನಗರದಲ್ಲಿ ಬುದ್ಧಿಮಾಂದ್ಯ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದವರು ಸಹ ಅಪ್ರಾಪ್ತರು. ಬಾಲ ಕಾಮುಕರ ಈ ಕೃತ್ಯ ಜನರನ್ನು ತಲ್ಲಣಗೊಳಿಸಿದೆ. ಬುದ್ಧಿಮಾಂದ್ಯ ಅಪ್ರಾಪ್ತೆಯನ್ನು ೫ರಂದು ಐವರು ಸೇರಿ ಪುಸಲಾಯಿಸಿ ಹಾಗರಗಾ ರಸ್ತೆ ಚುಣ್ಣಾಬಟ್ಟಿ ಪ್ರದೇಶದ ಕಡೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬಾಲಕಿಗೆ ಮನೆಗೆ ಬಂದ ಎರಡು ದಿನದ ಬಳಿಕ ಗುಪ್ತಾಂಗ ಮತ್ತು ಹೊಟ್ಟೆ ನೋವು ಆಗುತ್ತಿದೆ ಎಂದು ಪಾಲಕರಿಗೆ ತಿಳಿಸಿದ್ದಾಳೆ. ಆಗ ವಿಚಾರಿಸಿದಾಗ ಘಟನೆಯನ್ನು ಬಿಡಿಸಿ ಹೇಳಿದ್ದಾಳೆ. ನಂತರ ವಿಶ್ವವಿದ್ಯಾಲಯ ಠಾಣೆಗೆ ಭಾನುವಾರ ಮಾಹಿತಿ ನೀಡಿದ್ದಾರೆ. ೧೪ರಿಂದ ೧೫ ವರ್ಷದ ಐವರು ಸೇರಿ ಆಕೆ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯ ನಡೆಸಿದವರನ್ನು ಪೊಲೀಸರು ಸೋಮವಾರ ಸಂಜೆ ವಶಕ್ಕೆ ಪೆಡೆದಿದ್ದಾರೆ. ವಿವಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.