ಖರ್ಗೆ ದರ್ಶನಾಪುರ ಆಪ್ತನಿಗೆ ಎರಡನೇ ಸಲ ಒಲಿದ ಪಟ್ಟ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷÀರಾಗಿ ನಿರೀಕ್ಷೆಯಂತೆ ಸೋಮಶೇಖರ ಗೋನಾಯಕ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು. ಎರಡನೇಸಲ ಅವರು ಅಧ್ಯಕ್ಷರಾದರು. ಇದರೊಂದಿಗೆ ಡಿಸಿಸಿ ಬ್ಯಾಂಕ್‌ನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಸಫಲಗೊಂಡಿತು. ಬಿಜೆಪಿ ಶಕ್ತಿ ಕಳೆಗುಂದಿತು. ಗೋನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ವಲಯದಲ್ಲಿ ಒಬ್ಬರು. ಅಲ್ಲದೆ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಪರಮಾಪ್ತರು.
ನಗರದ ಗಾಜಿಪುರದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆಗಳನ್ನು ಚುನಾವಣಾಧಿಕಾರಿಗಳಾಗಿದ್ದ ಸಹಾಯಕ ಆಯುಕ್ತರಾದ ಮಮತಾಕುಮಾರಿ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಬ್ಯಾಂಕಿಗೆ ಹೊಸದಾಗಿ ನಾಮನಿರ್ದೇಶನಗೊಂಡ ಶಿರವಾಳ ಸೇರಿದಂತೆ ಕಾಂಗ್ರೆಸ್ ಬೆಂಬಲಿತರು ೧೧ ನಿರ್ದೇಶಕರಿದ್ದರು. ಹೀಗಾಗಿ ಕಾಂಗ್ರೆಸ್ ಬೆಂಬಲಿತರಾಗಿರುವ ಸೋಮಶೇಖರ ಅವರೊಬ್ಬರೆ ನಾಮಪತ್ರ ಸಲ್ಲಿಸಿದರು.
ನಿಗದಿತ ಸಮಯ ಮುಗಿಯುವವರೆಗೂ ಮತ್ಯಾರು ಉಮೇದುವಾರಿಕೆ ಸಲ್ಲಿಸಲಿಲ್ಲ. ಬಳಿಕ ನಾಮಪತ್ರ ಪರಿಶೀಲಿಸಿ ಅಂಗೀಕರಿಸಲಾಯಿತು. ಅವರೊಬ್ಬರೆ ನಾಮಪತ್ರö್ನ ಸಲ್ಲಿಸಿದ್ದರಿಂದ ಸೋಮಶೇಖರ ಗೋನಾಯಕ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಮತಾಕುಮಾರಿ ಪ್ರಕಟಿಸಿದರು. ಬೆನ್ನಲ್ಲಿಯೇ ಹೊರಗಡೆ ಜಮಾಗೊಂಡಿದ್ದ ಅವರ ಬೆಂಬಲಿಗರು, ಹಿತೈಷಿಗಳು,ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಾಧ್ಯಗಳನ್ನು ತಾಳಕ್ಕೆ ಹೆಜ್ಜೆ ಹಾಕಿ ಕುಣಿದರು. ಬ್ಯಾಂಕಿನ ನಿರ್ದೇಶಕರು, ಗಣ್ಯರು ಅಭಿನಂದಿಸಿದರು. ಸೋಮಶೇಖರ ಗೋನಾಯಕ ಅವರು ಡಿಸಿಸಿ ಬ್ಯಾಂಕಿನ ನೂತನ ಸಾರಥಿಯಾಗಲಿದ್ದಾರೆ ಎಂದು ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು.
ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರ ರಾಜೀನಾಮೆಯಿಂದ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನ ತೆರವಾಗಿತ್ತು. ಆಗ ಆಡಳಿತ ಮಂಡಳಿಯವರು ನಿಯಮದಂತೆ ಉಪಾಧ್ಯಕ್ಷ ಸುರೇಶ ಸಜ್ಜನ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು.
ನೂತನ ಆಧ್ಯಕ್ಷರ ಆಯ್ಕೆ ಚುನಾವಣೆಯ ಅಧಿಸೂಚನೆÀ ಹೊರಡಿಸಿದ ಬೆನ್ನಲ್ಲಿಯೇ ಡಿಸಿಸಿ ಬ್ಯಾಂಕಿನ ರಿಂಗ್ ಮಾಸ್ಟರ್ ಎಂದು ಕರೆಸಿಕೊಳ್ಳುವ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಪ್ಲಾನ್ ರೂಪಿಸಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿಸಲು ಕಾರ್ಯತಂತ್ರ ರೂಪಿಸಿ ಸಫಲರಾದರು.