ಜಿಲ್ಲೆ

ಕಲಬುರಗಿ ಮೊದಲ ಸಭೆಯಲ್ಲಿ ನೀರ ವಾರ್​

ಕಲಬುರಗಿ: ಬೇಸಿಗೆ ಶುರುವಾಗಿದೆ. ನಗರದ ಒಂದು ವಾರ್ಡಿಗೂ ಸಮರ್ಪಕ, ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಕೊಳವೆಬಾವಿಗಳು ಬಂದ್ ಆಗಿವೆ. ಮಹಿಳೆಯರು ಕೊಡ ಹಿಡಿದು ತಿರುಗುವ ದಾರುಣ ಸ್ಥಿತಿ ತಲೆದೋರಿದೆ. ೭-೮ ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕಸ ಎತ್ತುವಳಿ ತೃಪ್ತಿದಾಯಕವಾಗಿಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ಎತ್ತಿದ ಮಹಾನಗರ ಪಾಲಿಕೆ ಸದಸ್ಯರು ಗರಂ ಆದರು. ಕೆಲಹೊತ್ತು ಸಭೆಯಲ್ಲಿ ಗದ್ದಲ-ಗೊಂದಲ ಸೃಷ್ಟಿಯಾಗಿತ್ತು.
ಕಲಬುರಗಿ ಮೇಯರ್-ಉಪ ಮೇಯರ್ ಆಯ್ಕೆ ನಂತರ ಮೊದಲ ಬಾರಿಗೆ ಮಂಗಳವಾರ ಕರೆದಿದ್ದ ತುರ್ತು ಸಭೆಯಲ್ಲಿ ಕಂಡುಬAದ ದೃಶ್ಯವಿದು.
ಬೇಸಿಗೆ ಶುರುವಾಗಿದ್ದರಿಂದ ಕುಡಿಯುವ ನೀರಿಗೆ ಆದ್ಯತೆ ನೀಡಿ ತುರ್ತು ಸಭೆ ಕರೆಯಲಾಗಿತ್ತು. ಆದರೆ ಕಳೆದ ಅನೇಕ ತಿಂಗಳಿAದ ಕಾದುಕುಳಿತಿದ್ದ ಸದಸ್ಯರು ಈ ಸಭೆಯಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ಹೊರಹಾಕಿದರು.
ಎಲ್ ಆ್ಯಂಡ್ ಟಿ ಸ್ಪಂದಿಸುತ್ತಿಲ್ಲ
ವಾರ್ಡ್ ನಂ.೪೯ರ ಸದಸ್ಯೆ ಲತಾ ರವಿ ರಾಠೋಡ್ ಮಾತನಾಡಿ, ನಗರದ ಎಷ್ಟು ವಾರ್ಡುಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಮಾಹಿತಿ ಕೊಡಬೇಕು. ಬಹುತೇಕ ವಾರ್ಡ್ಗಳಲ್ಲಿ ಕೆಲಸ ನಡೆಯುತ್ತಿಲ್ಲ. ದಿನದ ೨೪ ಗಂಟೆ ನೀರು ಕೊಡುತ್ತೇವೆ ಎನ್ನುತ್ತಾರೆ. ಆದರೆ ನಿತ್ಯ ೨-೩ ತಾಸು ನೀರು ಸಿಗುತ್ತಿಲ್ಲ. ಸಣ್ಣಪುಟ್ಟ ಕೆಲಸಕ್ಕೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಈ ಕಂಪನಿಯವರ ಕೆಲಸ ತೃಪ್ತಿದಾಯಕವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕಂಪನಿಯ ಪ್ರತಿನಿಧಿ, ನಗರದ ವಾರ್ಡ್ ನಂ.೫೫, ೫೪, ೫೩, ೫೨, ೪೫, ೪೬, ೩೮, ೨೬, ೨೭ ಸೇರಿ ಅನೇಕ ವಾರ್ಡ್ಗಳಲ್ಲಿ ಪೈಪ್‌ಲೈನ್ ಕೆಲಸ ಜಾರಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪಾಲಿಕೆ ಇನ್ಸ್ಪೆಕ್ಟರ್ ಮಾತನಾಡಿ, ೨೦೦ ಕೊಳವೆಬಾವಿ ಬಂದ್ ಆಗಿದ್ದವು. ಹೀಗಾಗಿ ಕಂಪನಿಯವರಿಗೆ ಹಸ್ತಾಂತರ ಮಾಡಿಲ್ಲ. ಫ್ಲಶಿಂಗ್ ಮಾಡಿ ಕೊಡುವುದಾಗಿ ಹಿಂದಿನ ಆಯುಕ್ತರು ಹೇಳಿದ್ದರು. ಆದರೆ ತುರ್ತು ಅಗತ್ಯವಿರುವ ವಾರ್ಡ್ಗಳಲ್ಲಿ ಆದ್ಯತೆ ಮೇರೆಗೆ ಫ್ಲಶಿಂಗ್ ಮಾಡಿ ನೀರಿನ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.
ಮೇಯರ್ ದರ್ಗಿ ಗರಂ
ಸದಸ್ಯರ ಸಮಸ್ಯೆ ಆಲಿಸಿದ ಮೇಯರ್ ವಿಶಾಲ್ ದರ್ಗಿ ಅಧಿಕಾರಿಗಳ ವಿರುದ್ಧ ಗರಂ ಆದರು. ಏನ್ರಿ ನೀವು ಮಿನರಲ್ ವಾಟರ್ ಕುಡಿತೀರಿ. ಜನಸಾಮಾನ್ಯರ ಪಾಡೇನು ? ಸಮಸ್ಯೆ ಇದೆ ಎಂದು ದೂರು ಹೇಳಿದರೆ ಅಟೆಂಡ್ ಮಾಡಲು ಸಮಸ್ಯೆ ಏನು ? ಈ ಸುಡು ಬಿಸಿಲಿನಲ್ಲಿ ವಾರ್ಡ್ ಸುತ್ತಿ ನೋಡ್ರಿ, ಜನರ ಪ್ರಾಬ್ಲಂ ಗೊತ್ತಾಗುತ್ತೆ. ಜನಪ್ರತಿನಿಧಿಗಳ ಸಮಸ್ಯೆಗೆ ಸ್ಪಂದಿಸದ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ್, ಎಲ್ ಆ್ಯಂಡ್ ಟಿ ಸಮಸ್ಯೆ, ವಿಳಂಬ ನೀತಿ ಕುರಿತು ಸರ್ಕಾರಕ್ಕೆ ಪತ್ರ ಬರೆದು ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಹಿರಿಯ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಹರಘರ್ ಜಲ್ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಹರ್ ವಾರ್ಡ್ ಜಲ್ ಕೊಡುತ್ತಿಲ್ಲ. ಬಿಜೆಪಿ ಸರ್ಕಾರ ಸುಳ್ಳು ಹೇಳಿಕೊಂಡು ಅಧಿಕಾರ ಮುಗಿಸಿದೆ. ಕುಡಿಯುವ ನೀರು ಸೇರಿ ನಗರದ ಮೂಲಸೌಲಭ್ಯಕ್ಕೆ ಈ ಸರ್ಕಾರ ಆದ್ಯತೆ ನೀಡಲೇ ಇಲ್ಲ ಎಂದು ರಾಜ್ಯ ಸರ್ಕಾರವನ್ನು ದೂರಿದಾಗ ಬಿಜೆಪಿ ಸದಸ್ಯರಾದ ವಿಜಯಕುಮಾರ ಸೇವಲಾನಿ, ಮಲ್ಲು ಉದನೂರು ಇತರರು ವಿರೋಧಿಸಿದರು. ಉಪ ಮೇಯರ್ ಶಿವಾನಂದ ಪಿಸ್ತಿ, ಆಯುಕ್ತ ಭುವನೇಶ ಪಾಟೀಲ್, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ್ ಇತರರು ಇದ್ದರು.