ಕಲಬುರಗಿ: ಜನಾರೋಗ್ಯ ಮತ್ತು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಏಕ ಬಳಕೆಯ ಪ್ಲಾಸ್ಟಿಕ್‌ಗೆ ನಗರದಲ್ಲಿ ಕಡಿವಾಣ ಹಾಕಲು ರೋಟರಿ ಕ್ಲಬ್ ಕಲಬುರಗಿ ಉತ್ತರ, ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಮತ್ತು ಅರಬಿಂದೋ ಸೊಸೈಟಿ ಸಂಕಲ್ಪ ಮಾಡಿವೆ. ಇದಕ್ಕಾಗಿ ನಗರದ ಎಲ್ಲ ೫೫ ವಾರ್ಡ್ಗಳಲ್ಲಿ ಜನಜಾಗೃತಿ ಮೂಡಿಸಿ `ಪ್ಲಾಸ್ಟಿಕ್ ಮುಕ್ತ ಕಲಬುರಗಿ' ಮಾಡುವ ಅಭಿಯಾನಕ್ಕೆ ಸೈ ಎಂದಿವೆ. ನಾಡಿನ ನಂ.೧ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ಇದಕ್ಕೆ ಸಾಥ್ ನೀಡಿದೆ.
ನಗರದ ಸುಪರ್ ಮಾರ್ಕೆಟ್‌ನಲ್ಲಿನ ಕೆಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಮಾರಂಭದಲ್ಲಿ ಜನಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಗರದಲ್ಲಿ ನಿರಂತರ ನಾನಾ ಕಾರ್ಯಚಟುವಟಿಕೆ ನಡೆಸಿ ಏಕ ಬಳಕೆ ಪ್ಲಾಸ್ಟಿಕ್‌ನಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವಿಶಾಲ್ ದರ್ಗಿ ಪೋಸ್ಟರ್ ಬಿಡುಗಡೆ ಮಾಡಿದರು. ಪಾಲಿಕೆ ಉಪ ಮೇಯರ್ ಶಿವಾನಂದ ಪಿಸ್ತಿ ಮಾತನಾಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಮಾತನಾಡಿದರು. ರೋಟರಿ ಜಿಲ್ಲಾ ಗವರ್ನರ್ ಮಾಣಿಕ್ ಪವಾರ್, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿದರು. ರೋಟರಿ ಉತ್ತರ ಅಧ್ಯಕ್ಷ ರಾಮಚಂದ್ರ ಶಾನಭೋಗ್, ಅರಬಿಂದೋ ಆಶ್ರಮ ಮುಖ್ಯಸ್ಥ ಅರವಿಂದ ಘಂಟೋಜಿ, ಪ್ರಮುಖರಾದ ಮಂಜುನಾಥ ಜೇವರ್ಗಿ, ಡಾ.ಬಾಬುರಾವ ಶೇರಿಕಾರ, ಸುನೀಲ ಬನಶೆಟ್ಟಿ, ಡಾ.ಶಂಭುಲಿAಗ ಪಾಟೀಲ್, ಚನ್ನವೀರ ಲಿಂಗನವಾಡಿ, ರಾಮಕೃಷ್ಣ ಬೋರಾಳಕರ, ಪ್ರಶಾಂತ ಮಾನಕರ, ಡಾ.ಗಿರೀಶ ಗಲಗಲಿ, ಮಹಾದೇವ ಖೇಣಿ, ದಿನೇಶ ಪಾಟೀಲ್, ಗುರುರಾಜ ಜಹಾಗಿರ್‌ದಾರ್, ಬಸವರಾಜ ಖಂಡೇರಾವ್, ಅಭಿಜೀತ ಪಡಶೆಟ್ಟಿ, ನಾರಾಯಣ ಜಹಾಗಿರ್‌ದಾರ್, ಶ್ಯಾಮ ಜೋಶಿ, ಸಂತಪ್ ತಪಾಡಿಯಾ ಇತರರಿದ್ದರು.
ಅರಬಿಂದೋ ಅವರ ೧೫೦ನೇ ಜನ್ಮ ದಿನ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ನೌಷದ್ ಇರಾನಿ ನಿರೂಪಣೆ ಮಾಡಿದರು. ರೋಟರಿ ಕ್ಲಬ್ ಸಖಿ ತಂಡದ ಸದಸ್ಯೆಯರು ಬಟ್ಟೆ ಕೈಚೀಲ ವಿತರಿಸಿದರು. ನಂತರ ಗಣ್ಯರು ಸುಪರ್ ಮಾರ್ಕೆಟ್‌ನಲ್ಲಿರುವ ಹಲವು ಅಂಗಡಿಗಳಿಗೆ ಭೇಟಿ ನೀಡಿ, ಪೋಸ್ಟರ್ ಅಂಟಿಸಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದರು.