ಕಲಬುರಗಿ: ಜಿಲ್ಲೆ ಸೇರಿ ನಾಡಿನ ಪ್ರಗತಿಗೆ ನರೇಂದ್ರ ಮೋದಿ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮತ್ತು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಪಕ್ಷದ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ 200 ಕೋಟಿ ವೆಚ್ಚದಲ್ಲಿ 210 ಕಿಮೀ ಪಿಎಂಜಿಎಸ್ವೈ ರಸ್ತೆ ಕೆಲಸ ನಡೆದಿದೆ. ಇಎಸ್ಐ ಆಸ್ಪತ್ರೆಯಲ್ಲಿ ಮೆಡಿಕಲ್ ರೆಕಾಡ್ಸ ಇನ್ ಡಿಪ್ಲೊಮಾ, ಓಟಿ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಬೆಂಬಲ ಬೆಲೆಯಲ್ಲಿ 325 ಕೋಟಿ ವೆಚ್ಚದಲ್ಲಿ ತೊಗರಿ ಖರೀದಿಸಲಾಗಿದೆ. 18 ಲಕ್ಷ ಜನರಿಗೆ ಕೇಂದ್ರದ ವಿಶೇಷ ಪಡಿತರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ ಮಾತನಾಡಿ, ಒಂದೇ ದೇಶ ಒಂದೇ ರೇಷನ್, ಏಕರೂಪದ ತೆರಿಗೆ ಪದ್ಧ್ದತಿ ಹೀಗೆ ಹಲವು ಮಹತ್ವದ ಯೋಜನೆಗಳನ್ನು ಪ್ರಧಾನಿ ಜಾರಿಗೊಳಿಸಿದ್ದಾರೆ. 370 ವಿಧಿ ರದ್ದುಗೊಳಿಸಿ ಜಮ್ಮ-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ರಚನೆ, ತ್ರಿವಳಿ ತಲಾಕ್ ರದ್ದು, ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಹೀಗೆ ಹಲವು ಮಾದರಿ ಕೆಲಸಗಳನ್ನು ಒಂದು ವರ್ಷದಲ್ಲಿ ಮಾಡಿದ್ದಾರೆ ಎಂದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಎರಡನೇ ಅವಧಿಯ ಮೊದಲ ವರ್ಷದಲ್ಲಿ ಜನಧನದಲ್ಲಿ 2.21 ಲಕ್ಷ ಫಲಾನುಭವಿಗಳು, ಮುದ್ರಾ ಯೋಜನೆಯಡಿ 6387 ಜನರಿಗೆ 65 ಕೋಟಿ ರೂ. ಸಾಲ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.94 ಲಕ್ಷ ಜನರು ವೃದ್ಧಾಪ್ಯ ಇತರ ಪಿಂಚಣಿ ಲಾಭ ಪಡೆದಿದ್ದಾರೆ. ಇಎಸ್ಐಸಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ರಕ್ತನಿಧಿ ಅರಂಭಿಸಲಾಗಿದೆ. ಜಿಮ್ಸ್ನಲ್ಲಿ ಕರೊನಾ ಪರೀಕ್ಷಾ ಲ್ಯಾಬ್ ಶುರುವಾಗಿದೆ. ಅಂಚೆ ವಿಮೆಯಲ್ಲಿ ದಾಖಲೆ ಫಲಾನುಭವಿಗಳು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಶವದ ರಾಜಕೀಯ ಮಾಡುತ್ತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ.ಜಾಧವ್, ಕರೊನಾ ಮುಗಿಯವವರೆಗೂ ರಾಜಕೀಯ ಮಾಡಲ್ಲ, ಮಾತನಾಡಲ್ಲ. ಆದರೆ ಒಂದಂತೂ ಸತ್ಯ. ಅಂದು ಶವ ತರಲು ಹಿರಿಯರಾದ ಬಿ.ಜಿ.ಪಾಟೀಲ್, ಮಾಲೀಕಯ್ಯ ಗುತ್ತೇದಾರ್ ಮಾಡಿರುವ ಕೆಲಸ ಮೃತ ವ್ಯಕ್ತಿ ಕುಟುಂಬದವರಿಗೆ ಗೊತ್ತಿದೆ. ಯಾರಿಗೂ ನೋವು ಅಗಬಾರದು. ಗೌರವಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕೆಲವು ಸತ್ಯ ಹೇಳಲು ಬರಲ್ಲ. ಬಿ.ಜಿ.ಪಾಟೀಲ್, ಮಾಲೀಕಯ್ಯ ಅವರಂಥವರ ಬಗ್ಗೆ ಗೊತ್ತಿಲ್ಲದೆ ಪ್ರಿಯಾಂಕ್ ಮಾತನಾಡುತ್ತಿದ್ದಾರೆ. ರಸೀದಿ ತೋರಿಸಿದ ಮಾತ್ರಕ್ಕೆ ಅವರೇ ಮಾಡಿದಂತೆ ಆಗದು. ಅದರ ಬಗ್ಗೆ ಚರ್ಚೆ ಬೇಡ. ನಾವು ಮಾಡಿದ್ದು ಜನರಿಗೆ ಗೊತ್ತಿದೆ. ಆರೋಪ ಮಾಡುವ ಪ್ರಿಯಾಂಕ್ ಖರ್ಗೆ ದೊಡ್ಡವರು ಎಂದು ಕಿಡಿಕಾರಿದರು.
ಜಿಪಂ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ದಂಡಪ್ಪ ಸಾಹು ಕುಳಗೇರಿ, ಪ್ರಮುಖರಾದ ಲಿಂಗರಾಜ ಬಿರಾದಾರ, ಬಾಬುರಾವ ಹಾಗರಗುಂಡಗಿ, ಕರಲಗೀಕರ್, ಸಿದ್ದಣ್ಣ ಹೂಗಾರ ಇತರರಿದ್ದರು.
ಕಲಬುರಗಿ ರೈಲ್ವೆ ವಿಭಾಗ ಕಾಮಗಾರಿ ಆದಷ್ಟು ಶೀಘ್ರ ಶುರುವಾಗಲಿದೆ. ಈ ಕುರಿತು ರಚಿಸಿದ ಸಮಿತಿ ವರದಿ ನೀಡಿದ್ದು, ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ. ಕರೊನಾ ಲಾಕ್ಡೌನ್ನಿಂದಾಗಿ ವಿಳಂಬವಾಗಿದೆ. ಎಲ್ಲ ಸಮಸ್ಯೆಗಳು ಪರಿಹಾರ ಆಗಿವೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಂತೆ ಇದು ಸಹ ಆರಂಭಗೊಳ್ಳಲಿದೆ. ಸಂಶಯ ಬೇಡ‘
| ಡಾ.ಉಮೇಶ ಜಾಧವ್ ಸಂಸದ
ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಅಮೋಘವಾಗಿವೆ. ಎಲ್ಲರನ್ನು ಜತೆಗೂಡಿಸಿಕೊಂಡು ಸರ್ವರ ಅಭಿವೃದ್ಧಿ ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಕರೊನಾ ನಿರ್ವಹಣೆಯಲ್ಲಿ ಮಾದರಿಯಾಗಿದೆ.
| ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ