ಕಲಬುರಗಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಲ ಕಲಬುರಗಿಗೆ ಆಗಮಿಸಿದ ಎನ್.ವಿ. ಅಂಜಾರಿಯಾ ಅವರನ್ನು ನ್ಯಾಯವಾದಿಗಳ ಸಂಘದ ಹೈಕೋರ್ಟ್ ಘಟಕದಿಂದ ಸೋಮವಾರ ಸತ್ಕರಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ನ್ಯಾ.ಅಂಜಾರಿಯಾ ಮಾತನಾಡಿ, ಸುಂದರವಾದ ಸಂಕೀರ್ಣ ಹೊಂದಿರುವ ಕಲಬುರಗಿ ಪೀಠ ನ್ಯಾಯದಾನ ಮಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 559ರ ಪೈಕಿ 524 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ನಿರ್ಣಯಿಸಿದ್ದಕ್ಕೆ ಪೀಠದ ಹಿರಿಯ ನ್ಯಾಯಮೂರ್ತಿ ಅಶೋಕ ಕಿಣಗಿ ಮತ್ತು ಅವರ ತಂಡದ ನ್ಯಾಯಮೂರ್ತಿಗಳಿಗೆ ಶುಭಾಶಯ ಕೋರಿದರು.
ಪೀಠದ ಹಿರಿಯ ನ್ಯಾಯಮೂರ್ತಿ ಅಶೋಕ ಕಿಣಗಿ ಮಾತನಾಡಿ, ಕಲಬುರಗಿ ಪೀಠ ಸ್ಥಾಪನೆಯಾದ ವರ್ಷ ಅಂದರೆ 2008ರಲ್ಲಿ ಕೇವಲ 10,600 ಪ್ರಕರಣಗಳು ಬೆಂಗಳೂರು ಹೈಕೋರ್ಟ್‍ನಿಂದ ಇಲ್ಲಿಗೆ ವರ್ಗಾವಣೆಯಾಗಿದ್ದವು. ಅಂದಿನಿಂದ ಈವರೆಗೆ (16 ವರ್ಷ) 1.15 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗಿವೆ. ಪ್ರಸ್ತುತ 26,000 ಪ್ರಕರಣಗಳು ವಿಲೇವಾರಿಗಾಗಿ ಬಾಕಿ ಇವೆ ಎಂದು ತಿಳಿಸಿದರು.
ನ್ಯಾಯಮೂರ್ತಿಗಳಾದ ಆರ್.ನಟರಾಜ, ಎಸ್.ವಿಶ್ವಜಿತಶೆಟ್ಟಿ, ಕೆ.ಎಸ್. ಹೇಮಲೇಖಾ, ಉಮೆಶ ಅಡಿಗ, ರಾಜೇಶ ರೈ.ಕೆ., ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ್, ಹೆಚ್ಚುವರಿ ರಿಜಿಸ್ಟ್ರಾರ್ ಬಸವರಾಜ ಚೇಂಗಟಿ, ಹೆಚ್ಚುವರಿ ರಿಜಿಸ್ಟ್ರಾರ್ (ನ್ಯಾಯಾಂಗ) ದಯಾನಂದ ಹಿರೇಮಠ, ಅಶೋಕ ಮುಲಗೆ, ಭೀಮರಾಯ ಎಂ.ಎನ್., ನಾಗಶೆಟ್ಟಿ ಪಾಟೀಲ್, ಎಸ್.ಎಸ್. ಹಿರೇಮಠ ಇದ್ದರು.
ಸಂಘದ ಅಧ್ಯP್ಷÀ ಗುಪ್ತಲಿಂಗ ಪಾಟೀಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ್ ನಿರೂಪಣೆ ಮಾಡಿದರು. ಖಜಾಂಚಿ ಶ್ರವಣಕುಮಾರ ಮಠ ವಂದಿಸಿದರು. ಕಲಬುರಗಿ ಮತ್ತು ಬೀದರ್ ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಸತ್ಕರಿಸಲಾಯಿತು.